ಬೆಂಗಳೂರು | ದೇವಸ್ಥಾನದಲ್ಲಿ ಮಹಿಳೆಗೆ ಮನಸ್ಸೋ ಇಚ್ಛೆ ಹಲ್ಲೆ ಪ್ರಕರಣ: ಆರೋಪಿ ಧರ್ಮದರ್ಶಿಯ ಬಂಧನ

ಬೆಂಗಳೂರು, ಜ.8: ಇತ್ತೀಚೆಗೆ ಅಮೃತಹಳ್ಳಿಯ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಪೂಜೆಗೆ ಆಗಮಿಸಿದ ಮಹಿಳೆಯೊಬ್ಬರಿಗೆ ಯದ್ವಾತದ್ವಾ ಹಲ್ಲೆ ನಡೆಸಿದ ಪ್ರಕರಣದ ಆರೋಪಿ, ದೇವಳದ ಧರ್ಮದರ್ಶಿ ಮುನಿಕೃಷ್ಣಪ್ಪ ಎಂಬಾತನನ್ನು ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 21ರಂದು ಅಮೃತಹಳ್ಳಿಯ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಘಟನೆ ನಡೆದಿತ್ತು. ದೇಗುಲದೊಳಗೆ ತೆರಳಿದ್ದ ಮಹಿಳೆಯೊಬ್ಬರ ಮೇಲೆ ಆರೋಪಿ ನಡೆಸಿದ್ದ ಹಲ್ಲೆಯ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು.
ಮಹಿಳೆಯ ದೂರು: ಗೃಹಿಣಿಯಾಗಿರುವ ನಾನು ಇಲ್ಲಿನ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಇತ್ತೀಚೆಗೆ ಹೋಗಿದ್ದೆ. ಈ ವೇಳೆ ಅಲ್ಲಿ ಮುನಿಕೃಷ್ಣಪ್ಪ ಎಂಬವರು ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೇ ಸ್ನಾನ ಮಾಡದೇ, ಶುದ್ಧಿ ಇಲ್ಲದೇ ದೇವಸ್ಥಾನಕ್ಕೆ ಬರುತ್ತೀರಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಮನಸ್ಸಿಗೆ ಬಂದ ಹಾಗೆ ನನಗೆ ಥಳಿಸಿದ್ದಾರೆ. ತಲೆ ಕೂದಲು ಹಿಡಿದು ದೇವಸ್ಥಾನದೊಳಗಿನಿಂದ ದರದರನೆ ಎಳೆದೊಯ್ದು ಹೊರಗೆ ಹಾಕಿದ್ದಾರೆ. ಯಾರಲ್ಲಾದರೂ ಈ ವಿಷಯ ಬಾಯಿಬಿಟ್ಟರೆ ನಿನ್ನನ್ನು ಮತ್ತು ನಿನ್ನ ಪತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಪೊಲೀಸ್ ದೂರಿನಲ್ಲಿ ತಿಳಿಸಿದ್ದರು.
ಘಟನೆ ಬಗ್ಗೆ ಅಂದು ಆರೋಪಿ ಮುನಿಕೃಷ್ಣಪ್ಪ ಸ್ಪಷ್ಟನೆ ಏನು?: 'ದೇವಸ್ಥಾನಕ್ಕೆ ಬಂದಿದ್ದ ಮಹಿಳೆ ತನಗೆ ಮೈಮೇಲೆ ದೇವರು ಬರುತ್ತದೆ. ವೆಂಕಟೇಶ್ವರ ನನ್ನ ಪತಿ. ಗರ್ಭಗುಡಿಯಲ್ಲಿ ನಾನು ವೆಂಕಟೇಶನ ಪಕ್ಕ ಕೂರಬೇಕೆಂದು ಪಟ್ಟು ಹಿಡಿದಿದ್ದಳು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಅರ್ಚಕರ ಮೇಲೆಯೇ ಉಗಿದಿದ್ದಳು. ಎಷ್ಟೇ ಮನವಿ ಮಾಡಿಕೊಂಡರೂ ಹೋಗದಿದ್ದಾಗ ಎಳೆದೊಯ್ದು ಹೊರಗಡೆ ಕಳಿಸಿದ್ದೇವೆ ಎಂದು ಹೇಳಿದ್ದ.
ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.







