ಕಾಸರಗೋಡು | ನಿಂತಿದ್ದ ಲಾರಿಗೆ ಕಾರು ಢಿಕ್ಕಿ: ಯುವಕ ಮೃತ್ಯು, ಮೂವರು ಗಂಭೀರ

ಕಾಸರಗೋಡು, ಜ.8: ರಸ್ತೆ ಬದಿ ನಿಲುಗಡೆಗೊಳಿಸಿದ್ದ ಲಾರಿಯ ಹಿಂಬದಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಕಾಸರಗೋಡು ನಗರದಲ್ಲಿ ಇಂದು ಮುಂಜಾನೆ ನಡೆದಿದೆ.
ಚೆಂಗಳ ನಿವಾಸಿ ಸಂಶುದ್ದೀನ್ ಎಂಬವರ ಪುತ್ರ ಮುಹಮ್ಮದ್ ಸಾಹಿಲ್(21) ಮೃತಪಟ್ಟವರು. ನಗರದ ಹಳೆ ಬಸ್ ನಿಲ್ದಾಣ ಪರಿಸರದಲ್ಲಿ ಈ ಅಪಘಾತ ಸಂಭವಿಸಿದೆ.
ಸಾಹಿಲ್ ಅಣಂಗೂರು ಕಡೆಯಿಂದ ಮೂವರು ಸ್ನೇಹಿತರ ಜೊತೆ ಕಾರಿನಲ್ಲಿ ಬರುತ್ತಿದ್ದಾಗ ನಿಲುಗಡೆಗೊಳಿಸಿದ್ದ ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಸಾಹಿಲ್ ಸ್ಥಳದಲ್ಲೇ ಮೃತಪಟ್ಟರೆ ಗಂಭೀರ ಗಾಯಗೊಂಡ ಮೂವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಈ ಬಗ್ಗೆ ಕಾಸರಗೋಡು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





