ದಕ್ಷಿಣಕ್ಕಿಂತಲೂ ಉತ್ತರ ಭಾರತದಲ್ಲಿ ಭಾರತ್ ಜೋಡೊ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ: ರಾಹುಲ್ ಗಾಂಧಿ

ಚಂಡಿಗಡ: ದಕ್ಷಿಣಕ್ಕೆ ಹೋಲಿಸಿದರೆ ಉತ್ತರದ ರಾಜ್ಯಗಳಲ್ಲಿ ಭಾರತ್ ಜೋಡೋ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ Rahul Gandhi ಹೇಳಿದ್ದಾರೆ. ಉತ್ತರ ಭಾರತದಲ್ಲಿ ನಮ್ಮ ಪಕ್ಷ ಸರಕಾರವನ್ನು ರಚಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕುರುಕ್ಷೇತ್ರದ ಬಳಿ ರವಿವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ಭಾರತ್ ಜೋಡೋ ಯಾತ್ರೆಗೆ ಎಲ್ಲೆಡೆ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತ್ ಜೋಡೋ ಯಾತ್ರೆಯು ಭಯ, ದ್ವೇಷ, ಹಣದುಬ್ಬರ, ನಿರುದ್ಯೋಗ ವಿರೋಧಿಸಿ ನಡೆಯತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಹಾಗೂ ಹಿಂದಿ ಬೆಲ್ಟ್‌ನಲ್ಲಿ ಯಾತ್ರೆಗೆ ಜನರಿಂದ ಪ್ರತಿಕ್ರಿಯೆ ಸಿಗುವುದಿಲ್ಲ ಎಂದು ಕೆಲವರು ಹೇಳಿದ್ದರು ಆದರೆ ಇದಕ್ಕೆ ವ್ಯತಿರಿಕ್ತವಾಗಿ ಈ ರಾಜ್ಯಗಳಲ್ಲಿ ನಮಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು ಹಾಗೂ ಅದು ಇನ್ನೂ ಹೆಚ್ಚುತ್ತಿದೆ'' ಎಂದು ಹೇಳಿದರು.
ಯಾತ್ರೆಯ ಟೀಕಾಕಾರರ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, "ಕೇರಳದಲ್ಲಿ ನಮಗೆ ಸಿಕ್ಕಿದ ಬೆಂಬಲಕ್ಕೆ ಪ್ರತಿಕ್ರಿಯಿಸಿದ ವಿರೋಧಿಗಳು, ಬಿಜೆಪಿ ಆಡಳಿತದ ರಾಜ್ಯವಾದ ಕರ್ನಾಟಕದಲ್ಲಿ ನಮಗೆ ಬೆಂಬಲ ಸಿಗುವುದಿಲ್ಲ ಎಂದಿದ್ದರು. ಆದರೆ ನಮಗೆ ಅಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಯಾತ್ರೆಗೆ ದಕ್ಷಿಣ ಭಾರತದಲ್ಲಿ ಪ್ರತಿಕ್ರಿಯೆ ಸಿಕ್ಕಿರಬಹುದು, ಆದರೆ ಅದು ಮಹಾರಾಷ್ಟ್ರವನ್ನು ತಲುಪಿದಾಗ ಅದಕ್ಕೆ ಆ ಪ್ರತಿಕ್ರಿಯೆ ಸಿಗುವುದಿಲ್ಲ ಎಂದು ಟೀಕಿಸಲಾಯಿತು. ನಾವು ಮಹಾರಾಷ್ಟ್ರವನ್ನು ತಲುಪಿದಾಗ ನಮಗೆ ದಕ್ಷಿಣಕ್ಕಿಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ದಕ್ಷಿಣ ರಾಜ್ಯಕ್ಕೆ ಹೋಲಿಸಿದರೆ ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಹರ್ಯಾಣದಲ್ಲಿ ನಿಜಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿ ನಮಗೆ ಬಡವರು, ರೈತರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ನಾವಿಲ್ಲಿ ಸರಕಾರ ರಚಿಸುತ್ತೇವೆ'' ಎಂದರು.







