ಕಾವಳಕಟ್ಟೆ: ಹಿದಾಯ ವಿಶೇಷ ಮಕ್ಕಳ ವಸತಿಯುತ ಶಾಲಾ ವಾರ್ಷಿಕ ಪ್ರತಿಭಾ ದಿನಾಚರಣೆ

ಬಂಟ್ವಾಳ: ಹಿದಾಯ ಫೌಂಡೇಶನ್ ಮಂಗಳೂರು ಇದರ ಅಧೀನದಲ್ಲಿ ಬಂಟ್ವಾಳ ತಾಲೂಕಿನ ಕಾವಳಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಹಿದಾಯ ವಸತಿಯುತ ಶಾಲಾ ವಾರ್ಷಿಕ ಪ್ರತಿಭಾ ದಿನಾಚರಣೆಯು ರವಿವಾರ ನಡೆಯಿತು.
ಹಿದಾಯ ಶೇರ್ ಆ್ಯಂಡ್ ಕೇರ್ ಕಾಲೋನಿಯಲ್ಲಿ ತಯಾರಿಸಲಾದ ವಸ್ತ್ರ ಹಾಗೂ ಕೈಚೀಲವನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಹಿದಾಯ ಫೌಂಡೇಶನ್ ಚಯರ್ಮೇನ್ ಮನ್ಸೂರ್ ಅಹ್ಮದ್ ಮಾತನಾಡಿ, 2006 ರಲ್ಲಿ 5 ಮಕ್ಕಳೊಂದಿಗೆ ಆರಂಭಗೊಂಡ ಈ ಸಂಸ್ಥೆಯಲ್ಲಿ ಇದೀಗ 35 ವಿಶೇಷ ಮಕ್ಕಳು ವಿದ್ಯಾರ್ಜನೆ ಗೈಯುತ್ತಿರುವುದು ನಮಗೆ ಹೆಮ್ಮೆ,ಸಂತೋಷ ತಂದಿದೆ. ಇಂತಹ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣ ಗೊಳಿಸಿದ ಶಿಕ್ಷಕರ ಸೇವೆ ಮತ್ತು ಶ್ರಮ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಫೌಂಡೇಶನ್ ನ ಕೇಂದ್ರೀಯ ಸಮಿತಿ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ ಮಾತನಾಡಿ, ಇಲ್ಲಿನ ಮಕ್ಕಳ ಸೇವೆಯಲ್ಲಿ ದೇವರನ್ನು ಕಾಣುವ ಶಿಕ್ಷಕರು ಹಾಗೂ ಸಿಬಂದಿಗಳ ಸೇವಾ ಮನೋಭಾವನೆ ಹಾಗೂ ಉದಾರತೆಗೆ ಅಭಿನಂದನೆ ಸಲ್ಲಿಸಿದರು. ಇಂತಹ ಮಕ್ಕಳ ಲಾಲನೆ, ಪಾಲನೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ನಾಟೆಕಲ್ ಕುನಿಲ್ ಇಲ್ಮ್ ಅಕಾಡೆಮಿ ವೈಸ್ ಚಯರ್ಮೇನ್ ಹಾಜಿ ಪಿ.ಎಸ್.ಮೊಹ್ದಿನ್ ಕುಂಞಿ ಮಾತನಾಡಿ, ಐಶ್ವರ್ಯಯುತ ಬದುಕಿಗಿಂತ ಆರೋಗ್ಯಯುತ ಬದುಕು ಶ್ರೇಷ್ಠವಾಗಿದ್ದು, ಇಂತಹ ಸಂಸ್ಥೆಗಳನ್ನು ನಡೆಸಲು ಶ್ರೀಮಂತಿಕೆ ಇದ್ದರೆ ಸಾಲದು ಹೃದಯ ಶ್ರೀಮಂತಿಕೆಯೂ ಬೇಕು ಎಂದು ಅಭಿಪ್ರಾಯಪಟ್ಟರು.
ಉದ್ಯಮಿ ಹಂಝ ಪರ್ಲಿಯ, ಹಿದಾಯ ಫೌಂಡೇಶನ್ ಸದಸ್ಯರುಗಳಾದ ಸಾದಿಕ್ ಹಸನ್, ಆಸಿಫ್ ಇಕ್ಬಾಲ್,ಅನ್ವರ್, ಇಬ್ರಾಹಿಂ, ಮೇಲ್ವಿಚಾರಕ ರವೂಫ್, ಶಿಕ್ಷಕಿಯರಾದ ಶಬೀನಾ, ನೌಶೀನಾ, ನಾಸಿರಾ, ನಾಫಿಲಾ, ಫಾತಿಮಾ, ಆಫಿಯಾ, ಹಫೀಫಾ, ಸಿಬ್ಬಂದಿ ಗಳಾದ ಐಶಾಬಿ, ಝೀನತ್, ಆಯಿಷಾ ಬಿ. ಹಸೀನಾ ಉಪಸ್ಥಿತರಿದ್ದರು.
ಹಕೀಂ ಕಲಾಯಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಆಶಾಲತಾ ವಾರ್ಷಿಕ ವರದಿ ವಾಚಿಸಿದರು
ಬಿ.ಎಂ.ತುಂಬೆ ವಂದಿಸಿ, ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ಮಕ್ಕಳ ವಿವಿಧ ಪ್ರತಿಭಾ ಕಾರ್ಯಕ್ರಮ ಮನುಷ್ಯ ಹೃದಯಕ್ಕೆ ನಾಟುವಂತಿತ್ತು.