2014ರ ನಂತರ ನಾವು ಕಾನೂನಿನ ಆಡಳಿತದ ದೇಶವಾಗಿ ಉಳಿದಿಲ್ಲ: ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್
"ಭಾರತದ ಸಂವಿಧಾನವನ್ನು ನಿರ್ಲಕ್ಷಿಸುವ ಸರಕಾರದೊಂದಿಗೆ ನೀವು ಹೇಗೆ ವ್ಯವಹರಿಸುತ್ತೀರಿ?"

ಹೊಸದಿಲ್ಲಿ: ‘2014ರ ನಂತರ ನಾವು ಕಾನೂನಿನ ಆಡಳಿತದ ದೇಶವಾಗಿ ಉಳಿದಿಲ್ಲ. ಆಡಳಿತ ವ್ಯವಸ್ಥೆಯು ಉದಾರವಾದಿ ಪ್ರಜಾಪ್ರಭುತ್ವದ (Democracy) ರಕ್ಷಣೆಯ ನಟನೆಯನ್ನು ನಿಲ್ಲಿಸಿದೆ, ಬದಲಿಗೆ ಸ್ವಾತಂತ್ರ್ಯ ಹೋರಾಟವು ಎಂದೂ ನಡೆದಿರಲಿಲ್ಲ ಮತ್ತು ಅದು ಈಗ ನಡೆಯುತ್ತಿದೆ ಎಂದು ನಮ್ಮನ್ನು ನಂಬಿಸಲು ಪ್ರಯತ್ನಿಸುತ್ತಿದೆ’ ಎಂದು ಕೇಂದ್ರ ಸರಕಾರವನ್ನು ಉಲ್ಲೇಖಿಸಿ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ (Senior Advocate Indira Jaising) ಅವರು ಇಲ್ಲಿ ಹೇಳಿದರು. ಅಖಿಲ ಭಾರತ ವಕೀಲರ ಒಕ್ಕೂಟವು ಶನಿವಾರ ಆಯೋಜಿಸಿದ್ದ ‘ಸಂವಿಧಾನವನ್ನು ಉಳಿಸಿ, ದೇಶವನ್ನು ಉಳಿಸಿ’ ಸಮಾವೇಶದಲ್ಲಿ ಮಾತನಾಡುತ್ತಿದ್ದ ಜೈಸಿಂಗ್, "ಸಂವಿಧಾನ ಮತ್ತು ದೇಶವನ್ನು ರಕ್ಷಿಸುವ ಬಗ್ಗೆ ನಾವು 2014ರಿಂದಲೂ ಮಾತನಾಡುತ್ತಿದ್ದೇವೆ. ನಾವು ಈಗಲೂ ರಕ್ಷಣಾತ್ಮಕವಾಗಿದ್ದೇವೆ, ನಾವು ಯಾವಾಗ ಆಕ್ರಮಣಕಾರಿಯಾಗುತ್ತೇವೆ ಎನ್ನುವುದು ನನಗೆ ತಿಳಿದಿಲ್ಲ ’ ಎಂದು ಹೇಳಿದರು.
‘ಆಡಳಿತ ವ್ಯವಸ್ಥೆಯು ಸಂವಿಧಾನವನ್ನು ಕಡೆಗಣಿಸುತ್ತಿದೆ. ಇದು ನಮ್ಮೆದುರು ಇರುವ ಸವಾಲು ಆಗಿದೆ. ಭಾರತದ ಸಂವಿಧಾನವನ್ನು ನಿರ್ಲಕ್ಷಿಸುವ ಸರಕಾರದೊಂದಿಗೆ ನೀವು ಹೇಗೆ ವ್ಯವಹರಿಸುತ್ತೀರಿ? 370ನೇ ವಿಧಿಯನ್ನು ರದ್ದುಗೊಳಿಸಿದ ಸಂದರ್ಭವನ್ನು ಹೊರತುಪಡಿಸಿ 2014ರಿಂದಲೂ ಸಂವಿಧಾನದ ತಿದ್ದುಪಡಿಯಾಗಿಲ್ಲ ಎನ್ನುವುದನ್ನು ನೆನಪಿಡಿ. ದಾಳಿಯೆಂದು ನಾವು ಪರಿಗಣಿಸಿರುವ ಎಲ್ಲ ಇತರ ಬದಲಾವಣೆಗಳು ಶಾಸನದ ಮೂಲಕ ಮತ್ತು ಸಾಮಾನ್ಯ ವಾಡಿಕೆಯ ಮೂಲಕ ಬಂದಿವೆ’ ಎಂದು ಹೇಳಿದ ಅವರು, ‘ಸಂವಿಧಾನವು ಸ್ವಾತಂತ್ರ ಚಳವಳಿಯ ಹೋರಾಟದ ಫಲಶ್ರುತಿಯಾಗಿದೆ ಎನ್ನುವುದು ನಮಗೆ ಗೊತ್ತು. ಅದು ಕಾನೂನಿನ ಆಡಳಿತವನ್ನು ತಂದಿತ್ತು. ಇಂದು ಕಾನೂನಿನ ಆಡಳಿತವನ್ನು ಕಡೆಗಣಿಸಲಾಗುತ್ತಿದೆ ಮತ್ತು ನಾವು ಕಾನೂನಿನ ಆಡಳಿತದ ದೇಶವೇ ಎಂಬ ಪ್ರಶ್ನೆಯನ್ನು ನಾವು ಎದುರಿಸಬೇಕಾಗಿದೆ. ನನ್ನ ದೃಷ್ಟಿಯಲ್ಲಿ ನಾವು ಕಾನೂನಿನ ಆಡಳಿತದ ದೇಶವಾಗಿ ಉಳಿದಿಲ್ಲ’ ಎಂದರು.
ವಕೀಲರ ಮೇಲೆ ಬೃಹತ್ ಜವಾಬ್ದಾರಿಯನ್ನು ಹೊರಿಸಿದ ಅವರು, ‘ವಕೀಲರಾಗಿ ನಾವು ಸಂವಿಧಾನದ ರಕ್ಷಣೆಯಲ್ಲಿ ಅತ್ಯಂತ ದೊಡ್ಡ ಪಾತ್ರವನ್ನು ವಹಿಸಬೇಕಿದೆ. ನಾವು ಒಂದಾಗುವುದು ಮತ್ತು ನಾವು ಇತಿಹಾಸದ ಶೃಂಗದಲ್ಲಿದ್ದೇವೆ ಎನ್ನುವುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಇಲ್ಲಿ ನಾವು ದೇಶವನ್ನು ವಿಫಲಗೊಳಿಸಿದರೆ ನಮ್ಮನ್ನು ಮಾತ್ರ ನಾವು ದೂಷಿಸಬೇಕಾಗುತ್ತದೆ. ಕಳೆದ 10 ವರ್ಷಗಳಲ್ಲಿ ದೇಶದಲ್ಲಿಯ ಎಲ್ಲ ಸವಾಲುಗಳು ನ್ಯಾಯಾಲಯದಲ್ಲಿಯೇ ಎದುರಾಗಿವೆ ಮತ್ತು ಸಂವಿಧಾನದ ಮೇಲೆ ದಾಳಿ ನಡೆಯುವವರೆಗೂ ಇದು ಮುಂದುವರಿಯುತ್ತಲೇ ಇರುತ್ತದೆ. ಹೀಗಾಗಿ ವಕೀಲರಾಗಿ ನಾವು ನಮ್ಮ ಮೇಲೆ ಹೊರಿಸಲಾಗಿರುವ ಕರ್ತವ್ಯದ ತೀವ್ರ ಸ್ವರೂಪವನ್ನು ಗುರುತಿಸುವ ಅಗತ್ಯವಿದೆ’ ಎಂದರು.
2014ರ ನಂತರ ಆಡಳಿತ ವ್ಯವಸ್ಥೆಯು ತನ್ನ ಎಲ್ಲ ಹೇಳಿಕೆಗಳಲ್ಲಿ ಉದಾರವಾದಿ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ ಎಂದು ಸ್ಪಷ್ಟಪಡಿಸಿದೆ. ಸ್ವಾತಂತ್ರ್ಯ ಹೋರಾಟವು ಎಂದೂ ನಡೆದಿರಲಿಲ್ಲ ಮತ್ತು ಈಗ ಅದು ನಡೆಯುತ್ತಿದೆ, ನಮ್ಮ ಎಲ್ಲ ಹಕ್ಕುಗಳು ಮತ್ತು ಪ್ರಜಾಸತ್ತಾತ್ಮಕ ಆಚರಣೆಗಳು ವೇದಗಳಿಂದ ಹುಟ್ಟಿಕೊಂಡಿವೆ ಮತ್ತು ವಿರಾಮ ನೀಡಲಾಗಿದ್ದ ಇವುಗಳನ್ನು ನಾವು ಮುಂದುವರಿಸುತ್ತಿದ್ದೇವೆ, ಸಂವಿಧಾನದಿಂದ ಜಾತ್ಯತೀತತೆ ಎಂಬ ಪದವನ್ನು ತೊಡೆದುಹಾಕಬೇಕು ಮತ್ತು ನಾವು ಸಂವಿಧಾನದ ಬದಲು ಸಾಂಸ್ಕೃತಿಕ ರಾಷ್ಟ್ರವಾದದಿಂದ ಆಳಲ್ಪಡಬೇಕು ಎಂದು ನಮ್ಮನ್ನು ನಂಬಿಸಲು ಆಡಳಿತ ವ್ಯವಸ್ಥೆಯು ಪ್ರಯತ್ನಿಸುತ್ತಿದೆ ’ ಎಂದ ಜೈಸಿಂಗ್, ‘ಅಂದು ತುರ್ತು ಸ್ಥಿತಿ ಕಾಗದದ ಮೇಲಿತ್ತು ಮತ್ತು ನಾವದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಿತ್ತು, ಆದರೆ ಈಗ ಅದು ಸಾಧ್ಯವಿಲ್ಲ’ ಎಂದರು.
ಇದನ್ನೂ ಓದಿ: ಶಾಲೆ ತೊರೆದು ಬೀಡಿ ಕಟ್ಟುತ್ತಿದ್ದ ಕಾಸರಗೋಡಿನ ವ್ಯಕ್ತಿ ಈಗ ಅಮೆರಿಕದಲ್ಲಿ ನ್ಯಾಯಾಧೀಶ







