VIDEO - ‘ಜನಸಾಹಿತ್ಯ ಸಮ್ಮೇಳನ’ದಲ್ಲಿ ಗಮನ ಸೆಳೆದ ವ್ಯಂಗ್ಯಚಿತ್ರ, ಪೋಸ್ಟರ್ ಪ್ರದರ್ಶನ

ಬೆಂಗಳೂರು, ಜ. 8: 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾಗಿ ಬೆಂಗಳೂರಿನಲ್ಲಿ ಜರುಗಿದ ‘ಜನಸಾಹಿತ್ಯ ಸಮ್ಮೇಳನ’ದಲ್ಲಿ ‘ಬಂಡಾಯದ ಗೆರೆಗಳು’ ವ್ಯಂಗ್ಯಚಿತ್ರ ಮತ್ತು ಪೋಸ್ಟರ್ ಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ರವಿವಾರ ಇಲ್ಲಿನ ಕೆ.ಆರ್.ವೃತ್ತಿದಲ್ಲಿನ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ಜನಸಾಹಿತ್ಯ ಸಮ್ಮೇಳನದ ಪ್ರಮುಖ ಆಕರ್ಷಣೆಯು ವ್ಯಂಗ್ಯಚಿತ್ರ, ಪೋಸ್ಟರ್ ಪ್ರದರ್ಶನವಾಗಿತ್ತು. ‘ಖಡ್ಗವಾಗಲಿ ಕಾವ್ಯ ಶೋಷಣೆಯ ವಿರುದ್ಧ, ಅಸಮಾನತೆ ವಿರುದ್ಧ, ಜನಾಂಗೀಯ ದ್ವೇಷ ವಿರುದ್ಧ’ ಎಂಬ ಘೋಷಣೆ ವಿಶೇಷವಾಗಿತ್ತು.
‘ಸರ್ವಜನಾಂಗದ ಶಾಂತಿಯ ತೋಟ’ಕ್ಕೆ ಬೆಂಕಿ ಇಟ್ಟು ‘ಗಾಂಧಿ ಚಿಂತನೆಗಳೇ ನಮಗೆ ದಾರಿದೀಪ’ ಎಂಬ ಮುಖ್ಯಮಂತ್ರಿಯವರನ್ನು ಹೋಲುವ, ‘ನೀವೇನೂ ಹೆದರಬೇಡ್ರೀ ಕೇಸನ್ನು ‘ತಿರುಗ ಮುರುಘ’ ಮಾಡುವುದು ಹೇಗೆ ಅಂತ ನಾನು ಹೇಳಿಕೊಡುತ್ತೇವೆ’ ಎಂಬ ಸ್ವಾಮಿಜಿಗಳ ಸಂಭಾಷಣೆಯ ಪಂಜುಗಂಗೊಳ್ಳಿ ಅವರ ವ್ಯಂಗ್ಯಚಿತ್ರಗಳು ನೋಡುಗರನ್ನು ಸೆಳೆಯಿತು.
ಖ್ಯಾತ ವ್ಯಂಗ್ಯಚಿತ್ರಗಾರರಾದ ಪಿ.ಮಹಮ್ಮದ್, ದಿನೇಶ್ ಕುಕ್ಕುಜಡ್ಕ, ಸತೀಶ್ ಆಚಾರ್ಯ, ಚೇತನ್ ಪುತ್ತೂರು, ಕಲಾವಿದ ಬಾದಲ್ ನಂಜುಂಡಸ್ವಾಮಿ, ಚಂದ್ರಶೇಖರ್ ಶೆಟ್ಟಿ, ಸರೋವರ್ ಬೆಂಕಿಕೆರೆ, ಉದಯ ಗಾಂವ್ಕರ್, ನವೀನ್ ಹಾಸನ, ವಿಶ್ವವಿನ್ಯಾಸ, ಸುನೈಫ್, ರೂಮಿ ಹರೀಶ್, ರೂಪಶ್ರೀ ಕಲ್ಲಿಗನೂರು, ಚರಿತಾ ಮೈಸೂರು, ನಭಾ ಒಕ್ಕುಂದ ಸೇರಿ ಹಲವು ಮಂದಿ ಕಲಾವಿದರ ವ್ಯಂಗ್ಯಚಿತ್ರ ಮತ್ತು ಪೋಸ್ಟರ್ ಗಳು ಪ್ರದರ್ಶನದಲ್ಲಿ ಕಂಡುಬಂದವು.










