ಕನ್ನಡ ಸಾಹಿತ್ಯ ಸಮ್ಮೇಳನ | ಸುಗ್ರೀವಾಜ್ಞೆ ಮೂಲಕ ಕನ್ನಡ ಭಾಷಾ ಅಭಿವೃದ್ಧಿ ಕಾನೂನು ಜಾರಿ ಸೇರಿ 6 ನಿರ್ಣಯಗಳ ಅಂಗೀಕಾರ

ಹಾವೇರಿ, ಜ.8: ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೆಯಕ ಕೂಡಲೇ ಅಧ್ಯಾದೇಶ(ಸುಗ್ರೀವಾಜ್ಞೆ) ಮೂಲಕ ಕಾನೂನಿನ ರೂಪ ಪಡೆದು ಶಿಕ್ಷಣ, ನ್ಯಾಯಾಂಗ, ಆಡಳಿತದಲ್ಲಿ ಕನ್ನಡ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು ಸೇರಿದಂತೆ ಒಟ್ಟು ಆರು ನಿರ್ಣಯಗಳನ್ನು ತೆಗೆದುಕೊಂಡು ಇವುಗಳನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕು ಎಂಬ 86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲಕ ರಾಜ್ಯ ಸರಕಾರಕ್ಕೆ ಆಗ್ರಹಿಸಲಾಯಿತು.
86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ರವಿವಾರ ಸಂಪ್ರದಾಯದಂತೆ ಕಸಾಪ ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ನಿರ್ಣಯ ಮಂಡಿಸಿದರು. ಪ್ರಾರಂಭದಲ್ಲಿಯೆ ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೆಯಕ ಕೂಡಲೇ ಸುಗ್ರೀವಾಜ್ಞೆ ಮೂಲಕ ಕಾನೂನಿನ ರೂಪ ಪಡೆದು ಶಿಕ್ಷಣ, ನ್ಯಾಯಾಂಗ, ಆಡಳಿತದಲ್ಲಿ ಕನ್ನಡ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು. ಕರ್ನಾಟಕ ಮಹಾರಾಷ್ಟ ಗಡಿ ವಿವಾದದ ಸಂಬಂಧ ಇರುವ ಮಹಾಜನ ವರದಿ ಈಗಾಗಲೇ ಸುಪ್ರೀಂ ಕೋರ್ಟ್‍ನಲ್ಲಿ ಪ್ರಶ್ನೆ ಮಾಡಲಾಗಿದ್ದು, ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಆ ಹಿನ್ನೆಲೆಯಲ್ಲಿ ನ್ಯಾಯಾಲಯದ ಅಂತಿಮ ತೀರ್ಪಿನ ಮಾರ್ಗದರ್ಶನದಂತೆ ಸೂಕ್ತ ಕ್ರಮವನ್ನು ವಿಳಂಬವಿಲ್ಲದೇ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅದೇ ರೀತಿ, ಕನ್ನಡಕ್ಕಾಗಿ ಹೊರಾಡಿದ ಕನ್ನಡ ಚಳವಳಿಗಾರರ ಮೇಲೆ ದಾಖಲಾಗಿರುವ ಮೊಕದ್ದಮೆಗಳನ್ನು ಸರಕಾರ ಈ ಕೂಡಲೇ ವಾಪಸ್ಸು ಪಡೆಯಬೇಕು. ಸಂವಿಧಾನದ ಎಂಟನೆ ಪರಿಚ್ಛೇದದ ಅನ್ವಯ ಎಲ್ಲ್ಲ ಪ್ರಾಂತೀಯ ಭಾμÉಗಳನ್ನು ಸಮಾನ ಎಂದು ಗುರುತಿಸಿರುವ ಹಿನ್ನೆಲೆ ಈ ಪಟ್ಟಿಯಲ್ಲಿರುವ 22 ಭಾಷೆಗಳಲ್ಲಿರುವ ಕನ್ನಡ ಭಾಷೆಯನ್ನೂ ಕರ್ನಾಟಕದ ಸಾರ್ವಭೌಮ ಭಾಷೆಯಾಗಿದೆ. ಇದರ ಮೇಲಿನ ಹಿಂದಿ ಅಥವಾ ಇನ್ಯಾವುದೇ ಭಾಷೆಯ ಆಕ್ರಮಣ ಹಾಗೂ ಹೇರಿಕೆಯನ್ನು ಈ ಸಮ್ಮೇಳನ ತೀವ್ರವಾಗಿ ಖಂಡಿಸುತ್ತದೆ ಎಂಬ ನಿರ್ಣಯ ಕೈಗೊಳ್ಳಲಾಯಿತು.
ಹಾಗೆಯೇ, ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲಿ ಆಯೋಜಿಸಬೇಕೆನ್ನುವ ನಿರ್ಣಯವನ್ನು ರಾಜ್ಯ ಸರಕಾರ ಈಗಾಗಲೇ ತೆಗೆದುಕೊಂಡಿದ್ದು, ಈ ಸಮ್ಮೇಳನವನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಆಯೋಜಿಸಬೇಕು. ನಿಯೋಜಿತ ಸಮ್ಮೇಳನದ ಸಂಬಂಧ ಸರಕಾರ ನಡೆಸುವ ಸಭೆಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಕೊಳ್ಳಬೇಕೆಂದು ಈ ಸಮ್ಮೇಳನದಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು.
ಕೊನೆಯದಾಗಿ, 86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಸ್ವಾಗತ ಸಮಿತಿ ಹಾಗೂ ವಿವಿಧ ಸಮಿತಿಗಳ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ, ಜಿಲ್ಲಾ ಆಡಳಿತ ಹಾಗೂ ಎಲ್ಲ ಕಾರ್ಯಕರ್ತರಿಗೂ ಮತ್ತು ಆತಿಥ್ಯವನ್ನು ನೀಡಿದ, ಪ್ರೀತಿತೋರಿದ ಹಾವೇರಿಯ ಸಮಸ್ತ ಜನತೆಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಯಿತು. ಅನಂತರ ಸಮ್ಮೇಳನದ ಸರ್ವಾಧ್ಯಕ್ಷ ಡಾ.ದೊಡ್ಡರಂಗೇಗೌಡ ಅವರು ಆರು ನಿರ್ಣಯಗಳನ್ನು ಅನುಮೋದಿಸಿದರು.
‘ಮತ್ತೊಮ್ಮೆ ಗೋಕಾಕ್ ಚಳವಳಿ ಆಗಬೇಕು’: ಕರ್ನಾಟಕದಲ್ಲಿ ಮತ್ತೊಮ್ಮೆ ಗೋಕಾಕ್ ಚಳವಳಿ ಆಗಬೇಕಿದೆ. ಇನ್ನೂ, ಪ್ರಸ್ತುತ ಕನ್ನಡ ವಿಶ್ವಮುಖಿ ಆಗಿದ್ದು, ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಲ್ಲಿ ಕನ್ನಡದ ಕೆಲಸಗಳಾಗುತ್ತಿವೆ.
-ಡಾ.ದೊಡ್ಡರಂಗೇಗೌಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ







