ಜಾರ್ಖಂಡ್:ಕಾರ್ಮಿಕ ಒಕ್ಕೂಟದ ನಾಯಕನ ಗುಂಡಿಕ್ಕಿ ಹತ್ಯೆ

ರಾಮಗಡ,ಜ.8: ಜಾರ್ಖಂಡ್ ನ ರಾಮಗಡ ಜಿಲ್ಲೆಯ ರಾಜರಪ್ಪಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಅಪರಿಚಿತ ದುಷ್ಕರ್ಮಿಗಳು ಕಾರ್ಮಿಕ ಒಕ್ಕೂಟದ ನಾಯಕ ರಮೇಶ ವಿಶ್ವಕರ್ಮ ಅವರನ್ನು ಗುಂಡಿಟ್ಟು,ಕತ್ತು ಸೀಳಿ ಭೀಕರವಾಗಿ ಹತ್ಯೆಗೈದಿದ್ದಾರೆ.
ರಾಜರಪ್ಪಾದ ಸೆಂಟ್ರಲ್ ಕೋಲ್ಫೀಲ್ಡ್ಸ್ ಲಿಮಿಟೆಡ್ (ಸಿಸಿಎಲ್) ನಲ್ಲಿ ದುಡಿಯುತ್ತಿದ್ದ ವಿಶ್ವಕರ್ಮ ನ್ಯಾಷನಲ್ ಕೋಲ್ ಮಜ್ದೂರ್ ಯೂನಿಯನ್ನ ನಾಯಕರಾಗಿದ್ದರು.
ಶನಿವಾರ ರಾತ್ರಿ 8:30ರ ಸುಮಾರಿಗೆ ವಿಶ್ವಕರ್ಮ ಯೂನಿಯನ್ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾಗ ಅಲ್ಲಿಗೆ ಬಂದಿದ್ದ ನಾಲ್ವರು ಶಸ್ತ್ರಸಜ್ಜಿತ ಕ್ರಿಮಿನಲ್ಗಳು ಅವರ ಬಗ್ಗೆ ವಿಚಾರಿಸಿದ್ದರು ಮತ್ತು ಅವರನ್ನು ಭೇಟಿಯಾಗಲು ವಿಶ್ವಕರ್ಮ ಹೊರಗೆ ತೆರಳಿದ್ದರು. ವಿಶ್ವಕರ್ಮರನ್ನು ಕೋಣೆಯೊಂದಕ್ಕೆ ಕರೆದೊಯ್ದ ದುಷ್ಕರ್ಮಿಗಳು ಅವರ ಮೇಲೆ ಹಲವಾರು ಗುಂಡುಗಳನ್ನು ಹಾರಿಸಿ,ಕತ್ತು ಸೀಳಿ ಅಲ್ಲಿಂದ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ವಿಶ್ವಕರ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ರಾಮಗಡ ಉಪವಿಭಾಗ ಪೊಲೀಸ್ ಅಧಿಕಾರಿ ಕಿಶೋರಕುಮಾರ ರಜಕ್ ಅವರು ತನ್ನ ತಂಡದೊಂದಿಗೆ ಧಾವಿಸಿ ಸ್ಥಳದಿಂದ ನಾಡಪಿಸ್ತೂಲೊಂದನ್ನು ವಶಪಡಿಸಿಕೊಂಡಿದ್ದಾರೆ.
ಕೊಲೆಗೆ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು,ಶೀಘ್ರವೇ ಹಂತಕರನ್ನು ಬಂಧಿಸಲಾಗುವದು ಎಂದು ರಜಕ್ ತಿಳಿಸಿದರು.





