ಉಡುಪಿ: ಕೆಮ್ತೂರು ತುಳು ನಾಟಕ ಪರ್ಬ ಉದ್ಘಾಟನೆ
ಉಡುಪಿ: ಉಡುಪಿ ತುಳುಕೂಟದ ವತಿಯಿಂದ ಆಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ, ಎಂಜಿಎಂ ಕಾಲೇಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ಮುದ್ದಣಮಂಟಪದಲ್ಲಿ ಆಯೋಜಿಸಿದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮರಣಾರ್ಥ ತುಳು ನಾಟಕ ಪರ್ಬವನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು.
ತುಳು ನಾಟಕದಲ್ಲಿ ತುಂಬ ಬದಲಾವಣೆಯಾಗಿದೆ. ಹಾಸ್ಯದತ್ತ ಜನರ ಆಸಕ್ತಿ ಹೆಚ್ಚಿದೆ. ತುಳು ಪಂಚದ್ರಾವಿಡ ಭಾಷೆಯಾದರೂ ಇನ್ನೂ ಸರಿಯಾದ ಮಾನ್ಯತೆ ಸಿಕ್ಕಿಲ್ಲ. ಅದು ಸಿಗುವವರೆಗೂ ಹೋರಾಟ ಮುಂದುವರಿಯಬೇಕು ಎಂದರು.
ತುಳುಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಯಶಪಾಲ್ ಎ. ಸುವರ್ಣ, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ, ಕೋಶಾಧಿಕಾರಿ ಚೈತನ್ಯ ಎಂ.ಜಿ., ಕೆಮ್ತೂರು ಕುಟುಂಬಸ್ಥ ವಿಜಯ ಕುಮಾರ್ ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಮೆಂಡನ್, ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ವಿಶ್ವನಾಥ್ ಶೆಣೈ, ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಉಪಸ್ಥಿತರಿದ್ದರು.
ನಾಟಕ ಪರ್ಬದ ಸಂಚಾಲಕ ಬಿ. ಪ್ರಭಾಕರ ಭಂಡಾರಿ ಪ್ರಸ್ತಾವನೆಗೈದರು. ಪದಾಧಿಕಾರಿ ದಿವಾಕರ ಸನಿಲ್ ಸ್ವಾಗತಿಸಿ, ಪ್ರಕಾಶ್ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಪೆರ್ಡೂರು ರಂಗ ಸಿಂಧೂರು ತಂಡದಿಂದ ರಮೇಶ್ ಆಚಾರ್ ನಿರ್ದೇಶನದಲ್ಲಿ ‘ಬಯ್ಯಮಲ್ಲಿಗೆ’ ನಾಟಕ ಪ್ರದರ್ಶಿಸಲ್ಪಟ್ಟಿತು.