ಮಂಗಳೂರು: ಅಮೃತ ವಿದ್ಯಾಲಯದಲ್ಲಿ ಸ್ವಾಸ್ಥ್ಯ ಮೇಳ

ಮಂಗಳೂರು: ಮಂಗಳೂರು ನಗರದ ಅಮೃತ ವಿದ್ಯಾಲಯದಲ್ಲಿ ಜನವರಿ 8 ರಂದು ಜರುಗಿದ ವಿವಿಧ ವೈಶಿಷ್ಟ್ಯತೆಗಳ "ಅಮೃತ ಆರೋಗ್ಯ ಮೇಳ" ನೆರವೇರಿತು.
ಯೆನಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕ್ಯಾನ್ಸರ್ ತಪಾಸಣೆ ಮಾಡುವ ಆಧುನಿಕ ಉಪಕರಣ ಸಹಿತ ವಾಹನದಲ್ಲಿ Mammography ಹಾಗೂ Pap test ಸೌಲಭ್ಯಗಳನ್ನು ಉಚಿತವಾಗಿ ನೀಡಲಾಯಿತು. ಅಲ್ಲದೆ ಆಯುಷ್ಮಾನ್ ಭಾರತ್ ಕಾರ್ಡ್, ಕಣ್ಣಿನ ತಪಾಸಣೆ, ದಂತರೋಗ ಚಿಕಿತ್ಸೆ, ಸಾಮಾನ್ಯ ಆರೋಗ್ಯ ತಪಾಸಣೆ, ಮಕ್ಕಳ ಚಿಕಿತ್ಸೆ, ಕ್ಯಾನ್ಸರ್ ತಪಾಸಣೆ, ರಕ್ತದ ಒತ್ತಡ, ಮಧುಮೇಹ ತಪಾಸಣೆ, ಕೊವ್ಯಾಕ್ಸಿನ್ ಬೂಸ್ಟರ್ ಡೋಝ್, ಮೆದುಳು ಜ್ವರ ಬರದಂತೆ ಜೆ ಇ ವ್ಯಾಕ್ಸಿನೇಷನ್, ಆಯುರ್ವೇದ, ಹೋಮಿಯೋಪತಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಹಾಗೂ ಉಚಿತ ಔಷಧ ವಿತರಣೆ ಮಾಡಲಾಯಿತು.
ಪುಷ್ಯ ನಕ್ಷತ್ರದ ದಿನವಾದುದರಿಂದ ಮಕ್ಕಳಿಗೆ ಸ್ವರ್ಣ ಬಿಂದು ಪ್ರಾಶನ ನೀಡಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಆಯುಷ್ ಇಲಾಖೆ , ದೇರಳಕಟ್ಟೆಯ ಏನಪೋಯ ವಿಶ್ವವಿದ್ಯಾಲಯದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ಆಯೋಜಿಸಲಾಯಿತು.
ಮಠಾಧಿಪತಿ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ಸ್ಥಳೀಯ ಕಾರ್ಪೊರೇಟರ್ ಜಗದೀಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ರೋಶನಿ ನಿಲಯದ ರಿಜಿಸ್ಟ್ರಾರ್ ವಿನಿತಾ ಕೆ., ಡಾ.ಸುಚಿತ್ರಾ ರಾವ್, ಯತೀಶ್ ಬೈಕಂಪಾಡಿ, ಡಾ.ಅಶೋಕ ಶೆಣೈ, ಪ್ರವೀಣ್ ಶಬರೀಶ್, ರಾಜನ್, ಡಾ.ದೇವದಾಸ್ ಕೆ.ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.ವೆನ್ಲಾಕ್ ಆಸ್ಪತ್ರೆಯ ನೇತ್ರಾಧಿಕಾರಿ ಡಾ.ಅನಿಲ್ ರಾಮಾನುಜಂ, ಡಾ.ಅನಿತಾ ಕಿರಣ್, ಡಾ.ಶಿಲ್ಪಾ ಹೆಗ್ಡೆ, ಡಾ.ರೇಖಾ ಪಿ.ಶೆಣೈ, ಡಾ.ಲೇಪಾಕ್ಷಿ ಕೆ., ಡಾ.ಪ್ರಕಾಶ್, ಡಾ.ಶ್ರೀ ದೇವಿ ಮೊದಲಾದ ಹಲವು ವಿವಿಧ ತಜ್ಞ ವೈದ್ಯರು ಮತ್ತು ಆರೋಗ್ಯ ಸೇವಾರ್ಥಿಗಳು ಭಾಗವಹಿಸಿ, ಸೇವೆಗೈದರು.
ರೋಶನಿ ನಿಲಯದ ಎನ್ ಎಸ್ಎಸ್ ವಿದ್ಯಾರ್ಥಿಗಳು ಫಲಾನುಭವಿಗಳಿಗೆ ಅಗತ್ಯ ಸಹಕಾರವಿತ್ತು ಸಹಕರಿಸಿದರು.
ಬೋಳೂರು ಪರಿಸರದ ನಾಗರಿಕರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡರು.