ಬಸವಣ್ಣನ ಪದ ಹಾಡಲು ಬಿಡದ ಮಹೇಶ ಜೋಶಿ ಹಾಳಾಗಿ ಹೋಗಲಿ..: ಸಮ್ಮೇಳನದಲ್ಲಿ ಹಿರಿಯ ಜನಪದ ಕಲಾವಿದೆಯಿಂದ ಹಿಡಿ ಶಾಪ!

ಹಾವೇರಿ, ಜ. 8: ‘ಆ ಅಧ್ಯಕ್ಷ ಮಹೇಶ ಜೋಶಿ ನನ್ನ ಗಾಯನವನ್ನೆ ರದ್ದು ಮಾಡಿದ್ದಾನೆ..! ಅದರಲ್ಲೂ ಬಸವಣ್ಣನ ಕುರಿತು ಹಾಡುತ್ತೇನೆ ಎಂದರೂ, ಬಿಡಲಿಲ್ಲ. ಅಷ್ಟೋ ದೂರು ಊರಿಂದ ಬಂದೆ, ಇಲ್ಲಿ ವೇದಿಕೆಯೇ ನೋಡದಂತೆ ಮಾಡಿದರು..! ಆತ ಈ ಕ್ಷಣವೇ ಹಾಳಾಗಿ ಹೋಗಲಿ’. ಹೀಗೆ, ಕಟುಶಬ್ದಗಳಿಂದ ಮಾಧ್ಯಮ ಪ್ರತಿನಿಧಿಗಳ ಬಳಿ ಹಿರಿಯ ಜನಪದ ಕಲಾವಿದೆ, ಕೆಂಪೇಗೌಡ ಪ್ರಶಸ್ತಿ ಪುರಸ್ಕೃತೆ ರುಕ್ಮಣಿ ಮಲ್ಲಪ್ಪ ಹರ್ನಾಳ್ ಅಳಲು ತೋಡಿಕೊಂಡರು.
ರವಿವಾರ ಇಲ್ಲಿನ ಹಾವೇರಿಯಲ್ಲಿ ನಡೆಯುತ್ತಿರುವ 86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೆ ದಿನ ರವಿವಾರ ವೇದಿಕೆ ಹಿಂಭಾಗವಿರುವ ಮಾಧ್ಯಮ ಕೊಠಡಿ ಬಳಿ ಆಗಮಿಸಿದ ಜಮಖಂಡಿ ಮೂಲದ ಹಿರಿಯ ಜಾನಪದ ಕಲಾವಿದೆ ರುಕ್ಮಣಿ ಮಲ್ಲಪ್ಪ ಹರ್ನಾಳ್ ಅವರು, ತಮ್ಮನ್ನು ಸಾಹಿತ್ಯ ಸಮ್ಮೇಳನದಲ್ಲಿ ಉದ್ದೇಶ ಪೂರಕವಾಗಿ ಕಡೆಗಣನೆ ಮಾಡಿರುವ ಕುರಿತು ಹೇಳಿ ಕಣ್ಣೀರು ಹಾಕಿದರು.
ಸಾಹಿತ್ಯ ಸಮ್ಮೇಳನಕ್ಕೂ ಮೊದಲೇ ಅಂದರೆ, ಆರು ತಿಂಗಳ ಹಿಂದೆಯೇ ಬಿಜೆಪಿ ಶಾಸಕ ನೆಹರು ಓಲೇಕಾರ ಅವರನ್ನು ಸಂಪರ್ಕಿಸಿ ಈ ಬಾರಿ ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನಗೆ ಜಾನಪದ ಹಾಡಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದೇ. ಆನಂತರ ಹಾವೇರಿಯಲ್ಲಿ ನಡೆದ ಆಯ್ಕೆ ಸಮಿತಿಯ ಸಭೆಯಲ್ಲೂ ಪಾಲ್ಗೊಂಡು ಜಾನಪದ ಹಾಡುಗಳನ್ನು ಹಾಡಿದೆ. ಇದನ್ನು ನೋಡಿದ ಅಂದಿನ ಅಧಿಕಾರಿಗಳು, ಇಲ್ಲಿನ ಜನಪ್ರತಿನಿಧಿಗಳು ನನನೆ ಅವಕಾಶ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿ ಜ.7ರಂದು ಅಂದರೆ ಸಮ್ಮೇಳನದ ಎರಡನೆ ದಿನ ಶನಿವಾರ ವೇದಿಕೆಗೆ ಬರುವಂತೆ ಸೂಚಿಸಿದ್ದರು.
ಅದರಂತೆ ಶನಿವಾರ ಬೆಳಗ್ಗೆಯೇ ಜಮಖಂಡಿಯಿಂದ ಹಾವೇರಿಗೆ ತಲುಪಿದೆ. ಆದರೆ, ಇಲ್ಲಿ ನಡೆದಿದ್ದೇ ಬೇರೆ. ಇಲ್ಲಿ ನನಗೆ ಒಳಗೆ ಬಿಡಲು ತಯಾರಿಲ್ಲ. ಇದನ್ನು ಕಂಡು ಗಬರಿಯಾದೆ, ಯಾರಿಗೆ ಕೇಳಬೇಕು ಎಂದು ಗೊತ್ತಾಗಲಿಲ್ಲ. ಆನಂತರ ಶಾಸಕನನ್ನೆ ಮೊಬೈಲ್ ಮೂಲಕ ಕರೆ ಮಾಡಿದಾಗ, ಅವರು ಕರೆದು ಅವಕಾಶ ಇಲ್ಲ ಎಂದರು. ಆನಂತರ, ನನ್ನನ್ನು ಪೊಲೀಸರಿಂದ ಹೊರದಬ್ಬಲಾಯಿತು. ಇದನ್ನು ನೋಡಿ ನಾನು ದಿಗ್ಬ್ರಮೆಯಾಯಿತು ಎಂದು ರುಕ್ಮಣಿ ಮಲ್ಲಪ್ಪ ಹರ್ನಾಳ್ ಕಣ್ಣೀರು ಸುರಿಸಿದರು.
ಜೋಶಿ ಯಾರನ್ನು ಸೇರಿಸಿಲ್ಲ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ, ತಮ್ಮ ಸಮುದಾಯವನ್ನೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಸ್ಥಳೀಯ, ಲಿಂಗಾಯುತ, ಮುಸ್ಲಿಮರು, ದಲಿತರನ್ನು ಇಲ್ಲಿ ಬಿಡದಂತೆಯೇ ನೋಡಲಾಗಿದ್ದು, ಭಾರೀ ಅನ್ಯಾಯವಾಗಿದೆ. ಆತ ಹಾಳಾಗಿ ಹೋಗಲಿ ಎಂದು ಅವರು ಟೀಕಿಸಿದರು.
ಬಸವಣ್ಣ ಪದಗಳು ಕೈಬಿಟ್ಟರು..!: ನಾನು ಈ ಹಿಂದೆ ನಡೆದ ಸಮ್ಮೇಳನ ತಯಾರಿ ಸಭೆಯಲ್ಲಿ ಪಾಲ್ಗೊಂಡು, ಬಸವಣ್ಣ ಹಾಗೂ ನೀಲಮ್ಮ ವಚನಗಳನ್ನು ಹಾಡಿದೆ. ಇದನ್ನು ಎಲ್ಲರೂ ಒಪ್ಪಿದ್ದರು. ಆದರೆ, ಏಕಾಏಕಿ ಮಹೇಶ್ ಜೋಶಿ ಇದಕ್ಕೆ ಅವಕಾಶ ನೀಡಲಿಲ್ಲ. ಇದಕ್ಕೆ ಕಾರಣವೇನು ಎಂಬುವುದು ಗೊತ್ತಾಗಬೇಕು ಎಂದು ರುಕ್ಮಣಿ ಮಲ್ಲಪ್ಪ ಹರ್ನಾಳ್ ಹೇಳಿದರು.







