ಗೋಮಾಂಸ ಸೇವನೆ ದೇಶದ್ರೋಹದ ಕೆಲಸ ಎಂದು ಬಿಂಬಿಸಲಾಗುತ್ತಿದೆ: ಡಾ.ರಂಗನಾಥ್ ಕಂಟನಕುಂಟೆ ಕಳವಳ

ಬೆಂಗಳೂರು, ಜ. 8: ಗೋಮಾಂಸ ತಿನ್ನುವುದು ದೇಶದ್ರೋಹದ ಕೆಲಸ ಎಂದು ಬಿಂಬಿಸಲಾಗುತ್ತಿದೆ. ಅದಕ್ಕೆ ತಕ್ಕಂತೆ ಕಾನೂನನ್ನು ರೂಪಿಸಿರುವುದರಿಂದ ವ್ಯವಸ್ಥಿತವಾಗಿ ಮನುಷ್ಯರನ್ನು ಅಪರಾಧಿಯಂತೆ ಶಿಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಲೇಖಕ ಡಾ.ರಂಗನಾಥ್ ಕಂಟನಕುಂಟೆ ಕಳವಳ ವ್ಯಕ್ತಪಸಿದ್ದಾರೆ.
ರವಿವಾರ ನಗರದ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ಆಯೋಜಿಸಿದ್ದ ಜನಸಾಹಿತ್ಯ ಸಮ್ಮೇಳನ ಆಹಾರಗೋಷ್ಠಿಯಲ್ಲಿ ‘ಆಹಾರದ ಮೇಲಿನ ರಾಜಕಾರಣ ಮತ್ತು ದೌರ್ಜನ್ಯ’ ವಿಷಯದ ಕುರಿತು ಮಾತನಾಡಿದ ಅವರು, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಈ ರೀತಿಯಾಗಿ ಅಪರಾಧಿ, ನಾಡದ್ರೋಹಿ, ಸಂಸ್ಕೃತಿದ್ರೋಹಿ ಎಂದು ಬಿಂಬಿಸಲಾಗುತ್ತಿದೆ. ಇದೇ ಸಮುದಾಯವನ್ನು ಅಪರಾಧಿಯನ್ನಾಗಿ ಮಾಡಲಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ ಮಟ್ಟವನ್ನು ತಲುಪಿದೆ ಎಂದರು.
ಆಹಾರದ ಮೇಲೆ ದಾಳಿ ನಡೆಸುತ್ತಿದ್ದಾರೆ. ಅಹಾರ ಸಂಸ್ಕೃತಿ ಎಂಬ ಹೆಸರಿನಲ್ಲಿ ಕೊಲೆ ಮಾಡಲಾಗುತ್ತಿದೆ. ದನ ಸಾಗಾಟ, ಆಹಾರದ ಮೇಲಿನ ದಾಳಿ ವರ್ಣಾಶ್ರಮ ವ್ಯವಸ್ಥೆಯಿಂದಲೂ ಬೆಳೆದುಕೊಂಡು ಬಂದಿದೆ. ನಮ್ಮ ವ್ಯವಸ್ಥೆಯಲ್ಲಿ ಆಹಾರವನ್ನು ಆಧರಿಸಿ, ಅವಮಾನಿಸುವುದು ಹಿಂದಿನಿಂದ ನಡೆದುಕೊಂಡು ಬಂದಿದೆ. ಇದು ಇಂದು ಅಂತಿಮ ಹಂತಕ್ಕೆ ಬಂದಿದೆ ಎಂದರು.
ನಗರದ ಹೊರವಲಯದಲ್ಲಿ ಚಿಕ್ಕ ದೇವಾಲಯ ಇತ್ತು. ಉದ್ಯಮಿಯ ದೇಣಿಗೆ ಹಣದಿಂದ ಅದನ್ನು ಅಭಿವೃದ್ಧಿಪಡಿಸಲಾಯಿತು. ಚಿಕ್ಕ ದೇವಾಲಯ ಆಗಿದ್ದಾಗ ಗೊಲ್ಲ ಸಮುದಾಯದವರು ಪೂಜಾರಿ ಆಗಿದ್ದರೂ, ಅಭಿವೃದ್ಧಿಪಡಿಸಿದ ದೇವಲಾಯಕ್ಕೆ ಬ್ರಾಹ್ಮಣನನ್ನು ಪೂಜಾರಿಯನ್ನಾಗಿ ಊರಿನ ಮುಖಂಡ ನೇಮಕ ಮಾಡಿದ್ದಾನೆ. ಕಾರಣ ಶೂದ್ರರು ಮಾಂಸವನ್ನು ತಿನ್ನುತ್ತಾರೆ, ಬ್ರಾಹ್ಮಣನೂ ಮಡಿವಂತಿಕೆ ಪಾಲಿಸುತ್ತಾನೆ ಎಂಬ ಭಾವನೆ ಇದೆ. ಮಾಂಸ ಸೇವನೆ ಹೊಲಸು ಎಂದು ದೇವಸ್ಥಾನದ ವ್ಯವಹಾರವನ್ನು ಬ್ರಾಹ್ಮಣರ ತೆಕ್ಕೆಗೆ ವಹಿಸಲಾಗುತ್ತಿದೆ ಎಂದು ವಿಶ್ಲೇಷಿಸಿದರು.
‘ಸನಾತನ ವೈದಿಕ ಧರ್ಮದವರಿಗೆ ತಾವು ಶ್ರೇಷ್ಠರು ಎಂದು ಬಿಂಬಿಸಿಕೊಳ್ಳುವುದು ಒಂದು ರೋಗ. ಅದು ಶ್ರೇಷ್ಠತೆಯ ವ್ಯಸನ. ಅವರ ಸಂಸ್ಕೃತದ ಮೂಲಕ ಶ್ರೇಷ್ಟತೆಯನ್ನು ಬಿಂಬಿಸಲು ಪ್ರಯತ್ನಿಸುತ್ತಾರೆ. ತನ್ನ ಆಹಾರದ ಕ್ರಮ ಶ್ರೇಷ್ಠ ಎಂದು ಬಿತ್ತುತ್ತ ಸಮಾಜದ ಮೇಲೆ ತನ್ನ ಯಜಮಾನಿಕೆಯನ್ನು ಸಾಧಿಸುವುದಕ್ಕೆ ಪ್ರಯತ್ನ ಪಡುತ್ತದೆ’
-ಡಾ.ರಂಗನಾಥ್ ಕಂಟನಕುಂಟೆ, ಲೇಖಕ







