ಟಿಪ್ಪು ಇತಿಹಾಸದ ಜಾಗತಿಕ ನಾಯಕ: ಟಿ.ಗುರುರಾಜ್
‘ಜನಸಾಹಿತ್ಯ ಸಮ್ಮೇಳನದಲ್ಲಿ ಟಿಪ್ಪುಕೊಡುಗೆಗಳು’ ವಿಚಾರಗೋಷ್ಠಿ

ಬೆಂಗಳೂರು: ಕರ್ನಾಟಕಕ್ಕೆ ಟಿಪ್ಪು ಕೊಡುಗೆ ಏನು ಎಂಬುದಕ್ಕಿಂತ ಹೆಚ್ಚಾಗಿ ಇಡೀ ಜಗತ್ತಿಗೆ ಕರ್ನಾಟಕ ಕೊಟ್ಟ ಕೊಡುಗೆ ಟಿಪ್ಪುಎಂದು ಹೆಮ್ಮೆ ಯಿಂದ ಹೇಳಬೇಕು ಎಂದು ಟಿ.ಗುರುರಾಜ್ ಹೇಳಿದ್ದಾರೆ.
ಜನಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ನಾಡು ನುಡಿಗೆ ಟಿಪ್ಪು ಕೊಡುಗೆಗಳು ಕುರಿತು ವಿಚಾರ ಮಂಡಿಸಿದ ಅವರು, ಉಸಿರನ್ನು
ತೆಗೆದಷ್ಟೇ ಸುಲಭವಾಗಿ ಗಳಿಸಿದ ಹೆಸರನ್ನು ಅಳಿಸಲಿಕ್ಕಾಗದು ಎಂಬುದಕ್ಕೆ, ಬ್ರಿಟಿಷರ ವಿರುದ್ಧ ರಣರಂಗದಲ್ಲಿ ಹೋರಾಡುತ್ತ ಯಾವುದೋ ಅನಾಮಿಕ ಬ್ರಿಟಿಷ್ ಸೈನಿಕನ ಗುಂಡಿಗೆ ಬಲಿಯಾದ ಟಿಪ್ಪು ಸಾಕ್ಷಿ ಎಂದರು.
ಕಾವೇರಿ ನದಿ ನೀರನ್ನು ರೈತರ ಉಪಯೋಗಕ್ಕೆ ಬಳಸ ಬೇಕೆಂದು ಮೊದಲು ಕನಸು ಕಂಡಿದ್ದವನು ಟಿಪ್ಪು. ಆದರೆ ಅವನಿಗಿರುವ ನೂರೆಂಟು ರಾಜಕೀಯ ತಲೆನೋವುಗಳ ನಡುವೆ ಅದು ಸಾಕಾರವಾಗದೇ ಹೋಯಿತು. ಟಿಪ್ಪು ಅಪ್ಪಟ ಕನ್ನಡದ ಮನಸ್ಸುಳ್ಳವನಾಗಿದ್ದೆಂದು ಅವರು ಹೇಳಿದರು.
ಮೈಸೂರು ಸಂಸ್ಥಾನದ ಮುದ್ರೆ ಬಹುಕಾಲದವರೆಗೆ ಪರ್ಷಿಯನ್ ಅಕ್ಷರಗಳಲ್ಲಿತ್ತು. ಟಿಪ್ಪುವಿನ ಬಗ್ಗೆ ಇತಿಹಾಸ ಗೊತ್ತಿಲ್ಲದೇ ಮಾತನಾಡುವವರು ಅದನ್ನೇಕೆ ಪ್ರಶ್ನಿಸುತ್ತಿಲ್ಲ? ಯಾಕೆಂದರೆ ಇವರಿಗೆ ಸತ್ಯವನ್ನು ಪ್ರಶ್ನಿಸುವ ಧೈರ್ಯವಿಲ್ಲ ಎಂದರು. ಸ್ವಾರ್ಥಕ್ಕೆ ಸಮಾಜದ ಹಿತ ಮತ್ತು ವಿವೇಕವನ್ನು ಬಲಿ ಕೊಡುವ ಪ್ರಯತ್ನಗಳನ್ನು ಮಾಡಬೇಡಿ, ಎಷ್ಟೇ ಕಿಚ್ಚು ಹಚ್ಚಿದರೂ, ಕನ್ನಡಿಗರ ಮನಸ್ಸಿನೊಳಗೆ ಒಂದು ಜಾಗೃತಿ ಇದ್ದೇ
ಇರುತ್ತದೆ ಎಂದು ಅವರು ಟಿಪ್ಪು ವಿರೋಧಿಗಳನ್ನು ಎಚ್ಚರಿಸಿದರು. ಕಲೀಂ ಪಾಷಾ ಮಾತನಾಡಿ, ದಲಿತರು ಸ್ವಂತ ಭೂಮಿಯನ್ನು ಕಾಣುವಂತಾದದ್ದೇ ಹೈದರ್ ಮತ್ತು ಟಿಪ್ಪು ಕಾಲದಲ್ಲಿ. ಕೃಷಿ ಭೂಮಿಗೆ ದೊಡ್ಡ ಮಟ್ಟದಲ್ಲಿ ನೀರಾವರಿ ವ್ಯವಸ್ಥೆ ಯಾದದ್ದು, ರೈತರಿಗೆ ಬಡ್ಡಿರಹಿತ ಸಾಲ ಸಿಗುವಂತಾದದ್ದು ಟಿಪ್ಪು ರೈತಪರವಾಗಿದ್ದನೆಂಬುದಕ್ಕೆ ಸಾಕ್ಷಿ. ಅವನು ರೇಶ್ಮೆಯನ್ನು ಕರ್ನಾಟಕಕ್ಕೆ ತಂದವನು ಎಂದರು.
ಇದನ್ನೂ ಓದಿ: ಬಸವಣ್ಣನ ಪದ ಹಾಡಲು ಬಿಡದ ಮಹೇಶ ಜೋಶಿ ಹಾಳಾಗಿ ಹೋಗಲಿ..: ಸಮ್ಮೇಳನದಲ್ಲಿ ಹಿರಿಯ ಜನಪದ ಕಲಾವಿದೆಯಿಂದ ಹಿಡಿ ಶಾಪ!
ನಾಣ್ಯದಲ್ಲಿ ಲಕ್ಷ್ಮೀದೇವಿಯ ಚಿತ್ರವನ್ನು ಮುದ್ರಿಸಿದ ಟಿಪ್ಪು ಹೇಗೆ ಹಿಂದೂ ವಿರೋಧಿಯಾಗಿರಲು ಸಾಧ್ಯ? ಎಂದು ಪ್ರಶ್ನಿ ಸಿದ ಅವರು, ವಿಶ್ವದಲ್ಲಿಯೇ ಮೊದಲು ಟಿಪ್ಪು ಯುದ್ಧದಲ್ಲಿ ರಾಕೆಟ್ ತಂತ್ರಜ್ಞಾನವನ್ನು ತೋರಿಸಿದ್ದ. ಟಿಪ್ಪುವಿನ ಸೋಲು ಈ ನಾಡಿನ ಶೋಷಿತರ ಸೋಲು ಎಂದು ಬಣ್ಣಿಸಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ನಾ.ದಿವಾಕರ್ ಮಾತನಾಡಿ ಶೋಷಣೆ, ಅಸಹನೆ, ಹಿಂಸೆಯನ್ನು ದೇಶ ಸಹಿಸಿಕೊಂಡೇ ಬಂದಿದೆ. ನಮ್ಮವರೇ ಮಾಡಿದ ಹಿಂಸೆ ಯನ್ನೂ ಸಹಿಸಿಕೊಂಡಿದೆ ಎಂದರು.
ಸಮಸಮಾಜದ ಐಕಾನ್‌ಗಳನ್ನು ನಿರಾಕರಿಸುವ ಪ್ರಕ್ರಿಯೆ ಯೊಂದು ನಡೆಯುತ್ತಿದೆ. ಹಾಗೆಯೇ ಹೊಸ ಐಕಾನ್‌ಗಳನ್ನು ಸೃಷ್ಟಿಸುವ ಮೂಲಕ ಹಿಂದೂಪರ ನೆಲೆಯನ್ನು ಗಟ್ಟಿಗೊಳಿಸುವ ಕೆಲಸವೂ ನಡೆದಿದೆ ಎಂದ ಅವರು, ಇಂಥ ಪ್ರಯತ್ನಗಳ ಪರಿಣಾಮವಾಗಿ ಚಾರಿತ್ರಿಕ ಭಾರತದಲ್ಲಿ ಟಿಪ್ಪು ಬಲಿಯಾದರೆ, ಆಧುನಿಕ ಕಾಲದಲ್ಲಿ ನೆಹರೂ ಅವರನ್ನು ಬದಿಗೆ ಸರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಿಂಗದೇವರು ಹಳೆಮನೆ ಸಂಪಾದಕತ್ವದ ಧೀರ ಟಿಪ್ಪು ಲಾವಣಿಗಳು ಹಾಗೂ ಟಿ. ಗುರುರಾಜ್ ಬರೆದಿರುವ ‘ನಮ್ಮ ಟಿಪ್ಪು? ವದಂತಿ ಮತ್ತು ಸತ್ಯ ಸಂಗತಿ’ ಪುಸ್ತಗಳನ್ನು ಬಿಡುಗಡೆ ಮಾಡಲಾಯಿತು.







