ಕದನ ವಿರಾಮ ಅಂತ್ಯಗೊಳಿಸಿದ ಬೆನ್ನಲ್ಲೇ ರಶ್ಯದಿಂದ ಉಕ್ರೇನ್ ಮೇಲೆ ಬಾಂಬ್ ದಾಳಿ

ಮಾಸ್ಕೊ,ಜ.8: ತಾನು ಸ್ವಯಂಪ್ರೇರಿತವಾಗಿ ಘೋಷಿಸಿದ್ದ ಮೂರು ದಿನಗಳ ಕದನವಿರಾಮವನ್ನು ಶನಿವಾರ ಮಧ್ಯರಾತ್ರಿಯ ವೇಳೆಗೆ ಕೊನೆಗೊಳಿಸಿದ ಕೆಲವೇ ನಿಮಿಷಗಳ ಬಳಿಕ ರಶ್ಯವು ಪೂರ್ವ ಉಕ್ರೇನ್ನ ಪ್ರದೇಶಗಳ ಮೇಲೆ ಬಾಂಬ್ಗಳ ಸುರಿಮಳೆಗೈದಿದೆ. ಈ ದಾಳಿಯಲ್ಲಿ ಕನಿಷ್ಠ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ರಶ್ಯ ಹಾಗೂ ಉಕ್ರೇನ್ನಲ್ಲಿ ಶನಿವಾರ ಆರ್ಥೊಡೊಕ್ಸ್ ಕ್ರಿಸ್ಮಸ್ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಶುಕ್ರವಾರದಿಂದ 36 ತಾಸುಗಳ ಕದನವಿರಾಮವನ್ನು ಘೋಷಿಸಿದ್ದರು. ಆದರೆ ಈ ಕದನವಿರಾಮವನ್ನು ಉಕ್ರೇನ್ ತಿರಸ್ಕರಿಸಿತ್ತು .ಮಾಸ್ಕೊ ಕದನವಿರಾಮವನ್ನು ಕೊನೆಗೊಳಿಸಿದ ಬೆನ್ನಲ್ಲೇ ಈಶಾನ್ಯ ಪ್ರಾಂತವಾದ ಖಾರ್ಕಿವ್ನಲ್ಲಿ ರಶ್ಯ ಸೇನೆಯ ಶೆಲ್ ದಾಳಿಗೆ 50 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ ಎಂದು ಉಕ್ರೇನ್ ಆಡಳಿತ ತಿಳಿಸಿದೆ.ಉಕ್ರೇನ್ ಹಾಗೂ ರಶ್ಯ ದೇಶಗಳ ಬಹುತೇಕ ಆರ್ಥೊಡಕ್ಸ್ ಕ್ರೈಸ್ತರು ಜನವರಿ 7ರಂದು ಕ್ರಿಸ್ಮಸ್ ಹಬ್ಬವನ್ನು ಆಚರಿಸುತ್ತಾರೆ. ಆದರೆ ಈ ವರ್ಷ ಉಕ್ರೇನ್ ಆರ್ಥೊಡಕ್ಸ್ ಚರ್ಚ್ ಜನವರಿ 25ರಂದು ಕೂಡಾ ಕ್ರಿಸ್ಮಸ್ ಅಚರಣೆಗೆ ಅವಕಾಶ ನೀಜಿತ್ತು.
ಈ ಮಧ್ಯೆ ರಶ್ಯ ಹೇಳಿಕೆಯೊಂದನ್ನು ನೀಡಿ, ಉಕ್ರೇನ್ನಲ್ಲಿ ತನ್ನ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿಯೂ ತಿಳಿಸಿದೆ. ‘‘ ವಿಶೇಷ ಮಿಲಿಟರಿ ಕಾರ್ಯಾಚರಣೆಗಾಗಿ ಅಧ್ಯಕ್ಷ ಪುತಿನ್ ವಹಿಸಿಕೊಟ್ಟಿರುವ ಹೊಣೆಗಾರಿಕೆಯು ಇನ್ನಷ್ಟೇ ಈಡೇರಬೇಕಾಗಿದೆ. ಖಂಡಿತವಾಗಿಯ ಗೆಲುವು ದೊರೆಯಲಿದೆ ’’ ಎಂದು ರಶ್ಯದ ಸೇನಾಪಡೆಗಳ ಉಪವರಿಷ್ಠ ಸೆರ್ಗೆಯಿ ಕಿರಿಯೆಂಕೊ ತಿಳಿಸಿದ್ದಾರೆ.ಉಕ್ರೇನ್ನಲ್ಲಿ ರಶ್ಯದ ಸೇನಾಕ್ರಮಣ ಆರಂಭಗೊಂಡು 11 ತಿಂಗಳಾಗಿದ್ದು, ಸದ್ಯಕ್ಕೆ ಯುದ್ಧ ಕೊನೆಗೊಳ್ಳುವ ಲಕ್ಷಣಗಳು ಕಂಡುಬರುತ್ತಿಲ್ಲವಂದು ಅಂತಾರಾಷ್ಟ್ರೀಯ ವಿಶ್ಲೇಷಕರು ತಿಳಿಸಿದ್ದಾರೆ.







