ಕ್ರಿಸ್ಟಿಯಾನೊ ರೊನಾಲ್ಡೊ ಅಲ್ ನಸ್ರ್ ಸೇರ್ಪಡೆ: ವಿಶ್ವಕಪ್ ಫೈನಲ್ ಗಿಂತಲೂ ಅಧಿಕ ವೀಕ್ಷಣೆ

ದೋಹಾ: ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಅಲ್ ನಸ್ರ್ ಕ್ಲಬ್ ಸೇರ್ಪಡೆಯ ವಿಡಿಯೋ, ಲಿಯೊನೆಲ್ ಮೆಸ್ಸಿಯವರ (Lionel Messi) ವಿಶ್ವಕಪ್ ವಿಜೇತ ಕ್ಷಣಕ್ಕಿಂತಲೂ ಹೆಚ್ಚು ವೀಕ್ಷಣೆಯನ್ನು ದಾಖಲಿಸಿದೆ.
ಸ್ಪೇನ್ ಪತ್ರಕರ್ತ ರೆಡ್ರೊ ಸೆಪುವೆಡಾ ಅವರ ಪ್ರಕಾರ ರೊನಾಲ್ಡೊ ಉಪಸ್ಥಿತಿ ಇದ್ದ ಪಂದ್ಯವನ್ನು ವಿಶ್ವಾದ್ಯಂತ 40ಕ್ಕೂ ಹೆಚ್ಚು ಚಾನಲ್‌ಗಳಲ್ಲಿ 300 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫೈನಲ್ ಪಂದ್ಯವನ್ನು ಈ 40 ಚಾನಲ್‌ಗಳಲ್ಲಿ ಪ್ರಸಾರ ಮಾಡಿದರೆ, ಈ ಸಂಖ್ಯೆಯನ್ನೂ ಅದು ಮೀರಬಲ್ಲದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರೊನಾಲ್ಡೊ ಅಲ್ ನಸ್ರ್ ಉದ್ಘಾಟನಾ ಪಂದ್ಯದ ವೇಳೆ ಉಪಸ್ಥಿತರಿದ್ದರೂ, ಅವರು ಭಾಗವಹಿಸಲು ಸಾಧ್ಯವಾಗಲಿಲ್ಲ. ಅವರು ವಿಐಪಿ ಬಾಕ್ಸ್‌ನಲ್ಲಿ ಕುಳಿತು ಪಂದ್ಯ ವೀಕ್ಷಿಸಿದರು. ಈ ಪಂದ್ಯವನ್ನು ಅಲ್ ನಸ್ರ್ 2-0 ಅಂತರದಿಂದ ಗೆದ್ದಿದೆ. ಯುನೈಟೆಡ್ ತಂಡದಲ್ಲಿದ್ದಾಗ ಅಭಿಮಾನಿಯೊಬ್ಬರ ಮೊಬೈಲ್ ಅಪ್ಪಳಿಸಿದ ಕಾರಣಕ್ಕಾಗಿ ರೊನಾಲ್ಡೊ ಅವರಿಗೆ ಎರಡು ಪಂದ್ಯಗಳ ನಿಷೇಧ ಹೇರಿರುವ ಕಾರಣ, ರಿಯಾದ್‌ನಲ್ಲಿ ಬಹು ನಿರೀಕ್ಷಿತ ಚೊಚ್ಚಲ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ.
ಫಿಫಾ ನಿಯಮಾವಳಿ ಪ್ರಕಾರ, ಯಾವುದೇ ಆಟಗಾರನ ಮೇಲೆ ನಾಲ್ಕು ಪಂದ್ಯಗಳವರೆಗೆ ಹಿಂದಿನ ಸಂಸ್ಥೆ ನಿಷೇಧ ಹೇರಿದಾಗ, ಹೊಸ ಸಂಸ್ಥೆ ಕೂಡಾ ಅದನ್ನು ಅನುಸರಿಸಬೇಕಾಗುತ್ತದೆ. ಎಐ ಥಾಯ್ ವಿರುದ್ಧದ ಅಲ್ ನಸ್ರ್ ಪಂದ್ಯ ಗುರುವಾರ ನಡೆಯಬೇಕಿತ್ತು. ಆದರೆ ಭಾರಿ ಮಳೆಯಿಂದಾಗಿ 24 ಗಂಟೆ ಮುಂದೂಡಲ್ಪಟ್ಟಿತು. ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ತ್ಯಜಿಸಿದ ರೊನಾಲ್ಡೊ ಅಲ್ ನಸರ್ ಕ್ಲಬ್ ಸೇರಿದ್ದರು.