ದಿಲ್ಲಿಯಲ್ಲಿ ದಟ್ಟ ಮಂಜು: ಕನಿಷ್ಠ 29 ರೈಲುಗಳ ಸಂಚಾರ ವಿಳಂಬ, ವಿಮಾನ ಸೇವೆಗಳ ಮೇಲೂ ಪರಿಣಾಮ

ಹೊಸದಿಲ್ಲಿ: ದಿಲ್ಲಿ ಹಾಗೂ ಉತ್ತರ ಭಾರತದ ಇತರ ಭಾಗಗಳಲ್ಲಿ ದಟ್ಟವಾದ ಮಂಜಿನ ಸ್ಥಿತಿಯಿಂದಾಗಿ ಇಂದು ಬೆಳಿಗ್ಗೆ ಉಂಟಾದ ಕನಿಷ್ಠ ಗೋಚರತೆ ಪರಿಣಾಮ ಕನಿಷ್ಠ 29 ರೈಲುಗಳ ಸಂಚಾರ ವಿಳಂಬವಾಗಿದ್ದು, ವಿಮಾನ ಸೇವೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಸತತ ಐದನೇ ದಿನವೂ ರಾಜಧಾನಿಯಲ್ಲಿ ಶೀತಗಾಳಿಯ ಪರಿಸ್ಥಿತಿ ಮುಂದುವರಿದಿದೆ.
ರಾಷ್ಟ್ರ ರಾಜಧಾನಿಯಲ್ಲಿ ಇಂದು ಮುಂಜಾನೆ ಗೋಚರತೆ ಪ್ರಮಾಣವು 200 ಮೀಟರ್‌ಗೆ ಇಳಿದಿತ್ತು. ಮಂಜಿನ ಹೊದಿಕೆಯಿಂದಾಗಿ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದವು ಮತ್ತು ಅಪಾಯದ ದೀಪಗಳು ಕಂಡುಬಂದವು. ಬೆಳ್ಲಂಬೆಳಗ್ಗೆ ದಿಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಮಂಜಿನಿಂದಾಗುವ ಅಪಾಯದ ಕುರಿತು ಎಚ್ಚರಿಕೆಯನ್ನು ನೀಡಿದರು. ಹಲವು ವಿಮಾನಗಳ ಸಂಚಾರಕ್ಕೆ ತೊಂದರೆಯಾಗಿದೆ ಎಂದು ತಿಳಿದುಬಂದಿದೆ. ಕೆಲವು ವಿಮಾನಗಳನ್ನು ಬೇರೆಡೆಗೆ ತಿರುಗಿಸಬೇಕಾಯಿತು, ಆದರೆ ಇನ್ನೂ ಯಾವುದೇ ದೊಡ್ಡ ವಿಳಂಬದ ವರದಿಯಾಗಿಲ್ಲ.
ಸಫ್ದರ್‌ಜಂಗ್ ವೀಕ್ಷಣಾಲಯದಲ್ಲಿ ಇಂದು ಬೆಳಗ್ಗೆ ಕನಿಷ್ಠ ತಾಪಮಾನ 3.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಲೋಧಿ ರಸ್ತೆ, ಅಯನಗರ್ ಹಾಗೂ ರಿಡ್ಜ್‌ನಲ್ಲಿನ ಹವಾಮಾನ ಕೇಂದ್ರಗಳು ಕ್ರಮವಾಗಿ 3.6 ಡಿಗ್ರಿ, 3.2 ಡಿಗ್ರಿ ಮತ್ತು 3.3 ಡಿಗ್ರಿಗಳಷ್ಟು ಕನಿಷ್ಠ ತಾಪಮಾನವನ್ನು ದಾಖಲಿಸಿವೆ.





