ಕೂಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಫಾಯಿ ಕರ್ಮಚಾರಿಗಳ ಧರಣಿ

ಮಂಗಳೂರುಮ ಜ.9: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸಫಾಯಿ ಕರ್ಮಚಾರಿಗಳು ಸೋಮವಾರ ಮುಂಜಾನೆಯಿಂದಲೇ ಕೆಲಸವನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಿದರಲ್ಲದೆ ಕೂಳೂರು ಗೋಲ್ಡ್ ಪಿಂಚ್ ಮೈದಾನದ ಮುಂದೆ ತ್ಯಾಜ್ಯ ಸಾಗಾಟದ ವಾಹನಗಳನ್ನು ನಿಲ್ಲಿಸಿ ಧರಣಿ ನಡೆಸಿದರು.
ರಾಜ್ಯ ಸರಕಾರವು ನಿಗದಿಗೊಳಿಸಿದ ವೇತನವನ್ನು ಆಂಟನಿ ವೇಸ್ಟ್ ಕಂಪನಿಯವರು ನೀಡದೆ ವಂಚಿಸಿದ್ದಾರೆ. ಅದನ್ನು ಯಥಾವತ್ತಾಗಿ ನೀಡಬೇಕು. ಕಾರ್ಮಿಕರ ಗಳಿಕೆ ರಜೆ ಮತ್ತು ನಿಗದಿತ ರಜೆ, ಉಪಹಾರ ಭತ್ತೆ ನೀಡಬೇಕು. ನಾದುರಸ್ತಿ ವಾಹನಗಳನ್ನು ಬದಲಿಸಬೇಕು. ನಿಗದಿತ ಸಮಯಕ್ಕಿಂತ ಹೆಚ್ಚುವರಿಯಾಗಿ ದುಡಿಸುವುದನ್ನು ನಿಲ್ಲಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟರಲ್ಲದೆ ಅವುಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎಂಬಿ ನಾಗಣ್ಣಗೌಡ, ಮಂಗಳೂರು ಸಫಾಯಿ ಕರ್ಮಚಾರಿಗಳ ಸಂಘದ ಅಧ್ಯಕ್ಷ ಕೆ.ನಾರಾಯಣ ಶೆಟ್ಟಿ, ಕರ್ನಾಟಕ ಹೊರಗುತ್ತಿಗೆ ನೌಕರರ ಸಂಘದ ಮುಖಂಡರಾದ ಎಂ.ಚಂದ್ರು, ಹೊರಗುತ್ತಿಗೆ ನೌಕರರ ಸಂಘದ ಕರಾವಳಿ ವಿಭಾಗದ ಸಂಚಾಲಕ ಅಣ್ಣಪ್ಪಕೆರೆಕಾಡು ಮಾತನಾಡಿದರು.
ಪ್ರತಿಭಟನಾ ಸ್ಥಳಕ್ಕೆ ಮೇಯರ್ ಜಯಾನಂದ ಅಂಚನ್, ಆಯುಕ್ತ ಅಕ್ಷಯ್ ಶ್ರೀಧರ್, ಆರೋಗ್ಯ ಇಲಾಖೆಯ ಅಧಿಕಾರಿ ಮಂಜಯ್ಯ ಶೆಟ್ಟಿ, ವಲಯ ಆಯುಕ್ತ ಶಬರಿನಾಥ ರೈ ಭೇಟಿ ನೀಡಿ ಪೌರ ಕಾರ್ಮಿಕರ ಜೊತೆ ಮಾತುಕತೆ ನಡೆಸಿದರು. ಮಂಗಳವಾರ ಸಂಜೆ 5ಕ್ಕೆ ನಗರಪಾಲಿಕೆಯ ಅಧಿಕಾರಿಗಳು ಹಾಗೂ ಆಂಟನಿ ವೇಸ್ಟ್ ಕಂಪನಿಯ ಮುಖ್ಯಸ್ಥರು ಮತ್ತು ಸಂಘಟನೆಯ ಪ್ರಮುಖರೊಂದಿಗೆ ವಿಶೇಷ ಸಭೆ ನಡೆಸಿ ಕಾರ್ಮಿಕರ ಬೇಡಿಕೆ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆಯನ್ನು ನೀಡಿದರು.
ಧರಣಿ ನೇತೃತ್ವವನ್ನು ಮಂಗಳೂರು ಸಪಾಯಿ ಕರ್ಮಚಾರಿಗಳ ಸಂಘದ ಮುಖಂಡರಾದ ಅಶೋಕ್ ಕೊಂಚಾಡಿ, ದಿನೇಶ್ ಕುಲಾಲ್, ಚೆನ್ನಕೇಶವ, ಸುಧೀರ್, ಸಿದ್ದರೂಡ, ಪೂವಪ್ಪವಹಿಸಿದ್ದರು.










