ಪತ್ರಕರ್ತರನ್ನು 'ದಲ್ಲಾಳಿಗಳು' ಎಂದು ಕರೆದ SP ಮಾಧ್ಯಮ ವಿಭಾಗ: ಪಕ್ಷದ ನಾಯಕನನ್ನು ಬಂಧಿಸಿದ ಉತ್ತರಪ್ರದೇಶ ಪೊಲೀಸರು

ಲಕ್ನೊ: ಎಸ್‌ಪಿ (SP) ಮಾಧ್ಯಮ ವಿಭಾಗ ಮಾಡಿದ್ದ ಕೆಲವು ಆಕ್ಷೇಪಾರ್ಹ ಟ್ವೀಟ್‌ಗಳ ಹಿಂದೆ ಎಸ್‌ಪಿ ನಾಯಕ ಮನೀಶ್ ಜಗನ್ ಅಗರ್‌ವಾಲ್ (Manish Jagan Agrawal) ಇದ್ದಾರೆ ಎಂದು ಬಿಜೆಪಿಯ ಯುವ ಘಟಕವಾದ ಭಾರತೀಯ ಯುವ ಜನ ಮೋರ್ಚಾದ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥೆ ರಿಚಾ ರಜಪೂತ್ ನೀಡಿದ್ದ ದೂರನ್ನು ಆಧರಿಸಿ, ಉತ್ತರ ಪ್ರದೇಶ ಪೊಲೀಸರು ಅವರನ್ನು ರವಿವಾರ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು Indian Express, "ನನ್ನ ಮೇಲೆ ಅತ್ಯಾಚಾರವೆಸಗಿ, ನನ್ನ ಚಾರಿತ್ರ್ಯ ಹರಣ ಮಾಡಲಾಗುತ್ತದೆ ಎಂದು ಬೆದರಿಕೆ ಒಡ್ಡಲಾಗಿದ್ದು, ನನ್ನ ಜೀವಕ್ಕೆ ಅಪಾಯವಿದೆ" ಎಂದು ರಿಚಾ ರಜಪೂತ್ ತಮ್ಮ ದೂರಿನಲ್ಲಿ ಆಪಾದಿಸಿದ್ದಾರೆ ಎಂದು ವರದಿ ಮಾಡಿದೆ. ಗಮನಾರ್ಹ ಸಂಗತಿಯೆಂದರೆ, ಸಮಾಜವಾದಿ ಪಕ್ಷದ ಸಂಸದರೊಬ್ಬರ ವಿರುದ್ಧ ಆಕ್ಷೇಪಾರ್ಹ ಪದ ಬಳಿಸಿದ ಕಾರಣಕ್ಕೆ ಅದೇ ದಿನದಂದು ರಿಚಾ ರಜಪೂತ್ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಾಗಿದೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿರುವ ಲಕ್ನೊ ಪೊಲೀಸ್ ಆಯುಕ್ತ ಎಸ್.ಬಿ.ಶಿರಾಡ್ಕರ್, ಕಳೆದ 10-12 ದಿನಗಳಿಂದ ತನಿಖೆ ಕೈಗೊಂಡ ನಂತರ ಮನೀಶ್ ಜಗನ್ ಅಗರ್‌ವಾಲ್‌ರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
"ನಾವು ಇನ್ನಿತರ ಆಕ್ಷೇಪಾರ್ಹ ಪೋಸ್ಟ್‌ಗಳಲ್ಲಿ ಆತ ಹೊಂದಿರುವ ನಿರ್ದಿಷ್ಟ ಪಾತ್ರದ ಕುರಿತ ತನಿಖೆ ಇನ್ನೂ ಪ್ರಗತಿಯಲ್ಲಿದೆ" ಎಂದು ತಿಳಿಸಿರುವ ಅವರು, ಸಮಾಜವಾದಿ ಪಕ್ಷದ ಮಾಧ್ಯಮ ಟ್ವಿಟರ್ ಖಾತೆಯೊಂದಿಗೆ ಆತ ಹೊಂದಿರುವ ಸಂಪರ್ಕದ ಕುರಿತೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ" ಎಂದು ಹೇಳಿದ್ದಾರೆ.
ಮನೀಶ್ ಜಗನ್ ಅಗರ್‌ವಾಲ್ ಅನ್ನು ಭಾರತೀಯ ದಂಡ ಸಂಹಿತೆ 153A, 153B, 295A, 298, 420, 500, 501, 504, 505(2) ಮತ್ತು 506 ಸೆಕ್ಷನ್ ಅಲ್ಲದೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ 66, 67, 67a ಮತ್ತು 66b ಸೆಕ್ಷನ್‌ಗಳಡಿ ಬಂಧಿಸಲಾಗಿದೆ ಎಂದು ಲಕ್ನೊ ಪೊಲೀಸ್ ಆಯುಕ್ತರ ಕಚೇರಿ ಮಾಡಿರುವ ಟ್ವೀಟ್‌ನಲ್ಲಿ ತಿಳಿಸಲಾಗಿದೆ.
ಈ ಹಿಂದೆ ಕೂಡಾ ಸಮಾಜವಾದಿ ಪಕ್ಷದ ಮಾಧ್ಯಮ ವಿಭಾಗದ ವಿರುದ್ಧ ಪ್ರಾಥಮಿಕ ಮಾಹಿತಿ ವರದಿಗಳು ದಾಖಲಾಗಿದ್ದವು. ಯೋಗಿ ಆದಿತ್ಯನಾಥರ ಮಾಧ್ಯಮ ಸಲಹೆಗಾರರೊಂದಿಗಿರುವ ನನ್ನ ಭಾವಚಿತ್ರವನ್ನು ಹಂಚಿಕೊಂಡಿದ್ದಕ್ಕೆ, ನನ್ನನ್ನು ಸಮಾಜವಾದಿ ಪಕ್ಷದ ಮಾಧ್ಯಮ ವಿಭಾಗ "ತಲೆಹಿಡುಕ" ಮತ್ತು "ದಲ್ಲಾಳಿ" ಎಂದು ಟೀಕಿಸಿದೆ ಎಂಬ ಪತ್ರಕರ್ತರೊಬ್ಬರ ಆರೋಪವನ್ನು ಡಿಸೆಂಬರ್‌ನಲ್ಲಿ Newslaundry ವರದಿ ಮಾಡಿತ್ತು.
ಇದನ್ನೂ ಓದಿ: ರಾಜ್ಯ ಸರಕಾರ ಸಿದ್ಧಪಡಿಸಿದ ಭಾಷಣವನ್ನು ಓದದೆ ವಿಧಾನಸಭೆಯಿಂದ ಹೊರ ನಡೆದ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ







