ಕನಕಪುರ-ಮಂಡ್ಯ ಕ್ಷೇತ್ರದ ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು, ಜ.9: ಕನಕಪುರ ವಿಧಾನಸಭಾ ಕ್ಷೇತ್ರದ ಡಿ.ಎಂ.ವಿಶ್ವನಾಥ್ ಹಾಗೂ ಮಂಡ್ಯ ಜಿಲ್ಲೆಯ ರಾಧಾಕೃಷ್ಣ ಈ ಇಬ್ಬರೂ ನಾಯಕರು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿರುವುದು ಸಂತಸದ ವಿಚಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಉಭಯ ನಾಯಕರು ಹಾಗೂ ಅವರ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಅವರು, ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ವಿರುದ್ಧ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿ ಬಹಳ ಕಡಿಮೆ ಅಂತರದಲ್ಲಿ ಸೋತಿದ್ದ ಡಿ.ಎಂ.ವಿಶ್ವನಾಥ್ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಅವರ ಕುಟುಂಬ ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭವಾಗಿತ್ತು ಎಂದರು.
ಅವರು ನನ್ನ ಪರವಾಗಿ ಒಂದೆರಡು ಚುನಾವಣೆಗಳಲ್ಲಿ ಪ್ರಚಾರ ಮಾಡಿ ಬೆಂಬಲ ನೀಡಿದ್ದ ನೆನಪು ಈಗಲೂ ಹಸಿಯಾಗಿದೆ. ನಂತರ ಜೆಡಿಎಸ್ ನಲ್ಲಿ ನಾಯಕರಾಗಿ ಬೆಳೆಯುವ ಕನಸು ಕಂಡ ಕುಟುಂಬ ಜೆಡಿಎಸ್ ಸಂಘಟನೆಯ ಕೆಲಸ ಮಾಡಿಕೊಂಡು ಬಂದಿತ್ತು ಎಂದು ಅವರು ಹೇಳಿದರು.
ಇಡೀ ನಮ್ಮ ಜಿಲ್ಲೆಯಲ್ಲಿ ವಿಶ್ವನಾಥ್ ಪಕ್ಷ ಸಂಘಟನೆ ಕೆಲಸ ಮಾಡಿದ್ದಾರೆ. ಇಂದು ಅವರಿಗೆ ಬಿಜೆಪಿಯಿಂದ ಆಹ್ವಾನ ಇದ್ದರೂ ರಾಜ್ಯ, ಜಿಲ್ಲೆ ಹಾಗೂ ಕನಕಪುರ ಕ್ಷೇತ್ರದ ಪರಿಸ್ಥಿತಿ ಅವಲೋಕಿಸಿ, ಕಾಂಗ್ರೆಸ್ ಪಕ್ಷಕ್ಕೆಹೋಗಬೇಕು ಎಂದು ತಮ್ಮ ನಾಯಕರ ಜತೆ ಚರ್ಚೆ ಮಾಡಿ ಈ ತೀರ್ಮಾನ ಮಾಡಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ಮಂಡ್ಯದ ಕಿಲಾರ ಕ್ಷೇತ್ರದಲ್ಲಿ ಎಸ್.ಎಂ.ಕೃಷ್ಣ ಜತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ, ಜೆಡಿಎಸ್ ಪಕ್ಷದ ಜತೆ ಗುರುತಿಸಿಕೊಂಡಿದ್ದ ರಾಧಾಕೃಷ್ಣ ಬಹಳ ಹಿಂದೆಯೇ ಯಾವುದೇ ಷರತ್ತು ಇಲ್ಲದೆ ಪಕ್ಷಕ್ಕೆ ಸೇರುತ್ತೇವೆ ಎಂದು ಹೇಳಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಅಳಿಲು ಸೇವೆ ಮಾಡುತ್ತೇನೆ, ನನ್ನ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಮಂಡ್ಯ ಜಿಲ್ಲೆಯ ನಾಯಕರ ಸಮ್ಮುಖದಲ್ಲಿ ಅವರು ಪಕ್ಷ ಸೇರುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ನಮ್ಮ ಪಕ್ಷದಲ್ಲಿ ಹೊಸಬರು, ಹಳಬರು ಎಂಬ ವ್ಯತ್ಯಾಸವಿಲ್ಲದೆ, ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಲಾಗುವುದು. ಇದೇ ಕಾರಣಕ್ಕೆ ಮಂಡ್ಯದ ಕಾಂಗ್ರೆಸ್ ನಾಯಕರು ನಿಮ್ಮನ್ನು ಸ್ವಾಗತಿಸಲು ಇಂದು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧೃವನಾರಾಯಣ್, ಸಲೀಮ್ ಅಹ್ಮದ್, ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







