ಅಮೃತಜ್ಯೋತಿ ಯೋಜನೆ: ಮೆಸ್ಕಾಂನಿಂದ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್
ಇಲ್ಲಿದೆ ಮಾಹಿತಿ

ಉಡುಪಿ: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರರಿಗೆ (ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭಾಗ್ಯಜ್ಯೋತಿ /ಕುಟೀರ ಜ್ಯೋತಿ ಬಳಕೆದಾರರನ್ನು ಒಳಗೊಂಡಂತೆ) ಮಾಸಿಕ 75 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ಅಮೃತಜ್ಯೋತಿ ಯೋಜನೆಯನ್ನು ಸರಕಾರ ಜಾರಿಗೊಳಿಸಿದೆ.
ಮೆಸ್ಕಾಂ ವ್ಯಾಪ್ತಿಯಲ್ಲಿ ಈ ಯೋಜನೆಯ ಅನುಷ್ಟಾನದ ಬಗ್ಗೆ ಸೇವಾಸಿಂಧು ತಂತ್ರಾಂಶದಲ್ಲಿ ಅರ್ಹ ಫಲಾನುಭವಿಗಳನ್ನು ನೋಂದಾಯಿಸುವ ಕಾರ್ಯ ಪ್ರಗತಿಯಲ್ಲಿದ್ದು, ಫಲಾನುಭವಿಗಳಿಗೆ ಮಾಸಿಕ 75 ಯೂನಿಟ್‌ವರೆಗೆ ಮಾತ್ರ ಬಳಕೆಯ ವಿದ್ಯುತ್ ಶುಲ್ಕದ ಮೊತ್ತವನ್ನು ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ಮರುಪಾವತಿಸಲಾಗುವುದು.
ಈ ಪ್ರವರ್ಗದ ವಿದ್ಯುತ್ ಸ್ಥಾವರಗಳಿಗೆ ಮಾಪಕ (ಮೀಟರ್) ಅಳವಡಿಕೆ ಹಾಗೂ ಮಾಪಕ ಓದುವುದು ಕಡ್ಡಾಯವಾಗಿರುತ್ತದೆ. ಈ ಸೌಲಭ್ಯವನ್ನು ಪಡೆಯಲು ಫಲಾನುಭವಿಗಳು ಬಿಪಿಎಲ್ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರದ ದೃಢೀಕೃತ ದಾಖಲೆಗಳನ್ನು ಕಡ್ಡಾಯವಾಗಿ ಒದಗಿಸಬೇಕು.
ಈ ಸೌಲಭ್ಯಕ್ಕೆ ಅರ್ಹರಾಗುವ ವಿದ್ಯುತ್ ಗ್ರಾಹಕರು ಮಾಸಿಕ ವಿದ್ಯುತ್ ಬಿಲ್ಲನ್ನು ಸಂಪೂರ್ಣವಾಗಿ ನಿಗದಿತ ಅವಧಿಯೊಳಗೆ ಪಾವತಿಸಿದ ನಂತರ ಸದರಿ ಗ್ರಾಹಕರುಗಳಿಗೆ ಯೋಜನೆಯಡಿ ಸರಕಾರದ ಸಹಾಯಧನವನ್ನು ಮರು ಪಾವತಿಸಲಾಗುವುದು. ಗ್ರಾಹಕರು ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಬ್ಯಾಂಕ್ ಖಾತೆಯ ಸಂಖ್ಯೆ ಹಾಗೂ ಇತರೆ ಮಾಹಿತಿಗಳನ್ನು ಒದಗಿಸಬೇಕು. ಗ್ರಾಹಕರು 2022ರ ಏಪ್ರಿಲ್ 30ರ ಅಂತ್ಯಕ್ಕೆ ಇರುವ ಬಾಕಿ ವಿದ್ಯುತ್ ಶುಲ್ಕದ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದ್ದಲ್ಲಿ ಈ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.
ಹೆಚ್ಚಿನ ಮಾಹಿತಿ ಮತ್ತು ನೋಂದಣಿಗೆ ಸಮೀಪದ ಮೆಸ್ಕಾಂ ಉಪ ವಿಭಾಗ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.







