ಐಟಿಐ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಂಬುಗೆ ಮುಖ್ಯ: ವಿಶ್ವನಾಥ ಭಟ್
ಉಡುಪಿ: ವಿದ್ಯಾರ್ಥಿಗಳು ಕೈಗಾರಿಕಾ ಚಟುವಟಿಕೆಗೆ ಸಂಬಂಧಿ ಸಿದಂತೆ ಶಿಕ್ಷಣವನ್ನು ಪಡೆದ ನಂತರ ಪ್ರಾಯೋಗಿಕವಾಗಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಅನುಕೂಲವಾಗುವ ದೃಷ್ಟಿಯಿಂದ ಶಿಶಿಕ್ಷು ಮೇಳವನ್ನು ಆಯೋಜಿಸಲಾಗಿದೆ. ಇದು ಹೆಚ್ಚು ಉಪಯುಕ್ತವಾಗಿದೆ ಎಂದು ಐಎಂಸಿ ಮತ್ತು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಭಟ್ ಹೇಳಿದ್ದಾರೆ.
ಸೋಮವಾರ ನಗರದ ಸೈಂಟ್ ಮೇರೀಸ್ ಕೈಗಾರಿಕಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತುಜೀವನೋಪಾಯ ಮಂತ್ರಾಲಯ, ಕೈಗಾರಿಕಾ ತರಬೇತಿ ಮತ್ತುಉದ್ಯೋಗ ಇಲಾಖೆ ಉಡುಪಿ ಜಿಲ್ಲೆ ಹಾಗೂ ಸರಕಾರಿ, ಅನುದಾನಿತ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾದ ಶಿಶಿಕ್ಷು ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿಜೀವನದಲ್ಲಿ ಶಿಸ್ತು ಮತ್ತು ಬದ್ಧತೆಯನ್ನು ಇಟ್ಟುಕೊಳ್ಳುವುದರೊಂದಿಗೆ ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಸ್ವಯಂ ಉದ್ಯೋಗ ಕೈಗೊಂಡು ಕೈಗಾರಿಕೋದ್ಯಮಿಯಾಗಿ ಯಶಸ್ಸು ಕಾಣಲು ಸಾಧ್ಯ. ಇದಕ್ಕಾಗಿ ತಮ್ಮಲ್ಲಿ ಆತ್ಮವಿಶ್ವಾಸ ಹಾಗೂ ನಂಬಿಕೆ ಇರಬೇಕು ಎಂದವರು ನುಡಿದರು.
ಉಡುಪಿ ಚೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರೀಯ ಅಧ್ಯಕ್ಷರಾದ ಅಂಡಾರು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ನಮ್ಮ ದೇಶದ ಪ್ರಧಾನಿ ಯವರು ಆತ್ಮನಿರ್ಭರ್ ಭಾರತ್ ಯೋಜನೆಯಡಿ ಕೈಗಾರಿಕಗಳನ್ನು ಸ್ಥಾಪಿಸಲು ಹೆಚ್ಚು ಹೆಚ್ಚು ಉತ್ತೇಜನ ನೀಡುತ್ತಿದ್ದಾರೆ. ತಾವು ಇರುವ ಸ್ಥಳಗಳಲ್ಲಿಯೇ ಸಣ್ಣ-ಪುಟ್ಟ ಕೈಗಾರಿಕೆಗಳನ್ನು ಪ್ರಾರಂಭಿಸುವುದರೊಂದಿಗೆ ಉದ್ಯೋಗ ಸೃಷ್ಠಿಸಲು ಸಾಧ್ಯ ಎಂದರು.
ಸೈಂಟ್ ಮೇರೀಸ್ ಸಂಸ್ಥೆಯ ಸಂಚಾಲಕ ವಂ. ಚಾರ್ಲ್ಸ್ ಮೆನೆಜೇಸ್, ಉಡುಪಿ ಡಿಐಸಿ ಜಂಟಿ ನಿರ್ದೇಶಕ ನಾಗರಾಜ ನಾಯ್ಕ್, ಸೈಂಟ್ ಮೇರೀಸ್ ತರಬೇತಿ ಸಂಸ್ಥೆಯ ಪ್ರಾಂಶುಪಾಲ ವಿಜಯ್ ಮತ್ತಿತರರು ಉಪಸ್ಥಿತರಿದ್ದರು.







