ಮಾನವೀಯ ಮೌಲ್ಯ, ತೃಪಿಯಿಂದ ಭ್ರಷ್ಟಾಚಾರ ಮುಕ್ತ ಸಮಾಜ: ಜಸ್ಟಿಸ್ ಎನ್.ಸಂತೋಷ್ ಹೆಗ್ಡೆ ಆಶಯ
ಬಾರ್ಕೂರು: ನೇಶನಲ್ ಹೈಸ್ಕೂಲ್ ಅಮೃತ ಮಹೋತ್ಸವ ಸಮಾರೋಪ

ಉಡುಪಿ: ಪ್ರಸ್ತುತ ಕಾಲಘಟ್ಟದಲ್ಲಿ ಮಾನವೀಯ ಮೌಲ್ಯಗಳು ಕುಸಿತಗೊಂಡಿದೆ. ತೃಪ್ತಿ ದೂರವಾಗಿ ದುರಾಸೆ ಎಲ್ಲೆಡೆ ಮನೆ ಮಾಡಿದೆ. ಮನುಷ್ಯನ ಜೀವನದಲ್ಲಿ ತೃಪ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಬಾರಕೂರಿನಲ್ಲಿ ರವಿವಾರ ಬಾರ್ಕೂರು ವಿದ್ಯಾಭಿವರ್ಧಿನಿ ಸಂಘ, ಹಳೆ ವಿದ್ಯಾರ್ಥಿ ಸಂಘ, ಅಮೃತ ಮಹೋತ್ಸವ ಸಮಿತಿ, ನೇಷನಲ್ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಅಮೃತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಕ್ರಾಂತಿಯಿಂದ ಬದಲಾವಣೆ ಸಾಧ್ಯವಿಲ್ಲ. ಶಾಲೆಗಳಲ್ಲಿ ನೀತಿ ಪಾಠದ ಕೊರತೆ, ಮನೆಯಲ್ಲಿ ಪೋಷಕರ ಕಾರ್ಯ ಒತ್ತಡದಿಂದ ಮಕ್ಕಳ ಬಗ್ಗೆ ಕಾಳಜಿಗೆ ಹೆಚ್ಚಿನ ಗಮನ ನೀಡದಿರುವುದು. ಇನ್ನೊಂದೆಡೆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರಕುತ್ತಿದ್ದರೂ, ಅದನ್ನು ಸರಿಯಾಗಿ ಬಳಸಿಕೊಳ್ಳುವ ಬಗ್ಗೆ ಮಾಹಿತಿ ನೀಡದೇ ಇರುವುದರಿಂದ ಅವರಲ್ಲಿ ಮೌಲ್ಯಗಳು, ಮಾನವೀಯತೆ ಗುಣ ದೂರವಾಗಿದೆ. ವಿದ್ಯಾರ್ಥಿ ಹಂತದಲ್ಲಿಯೇ ಮೌಲ್ಯಗಳನ್ನು ತಿಳಿಸುವ ಪ್ರಯತ್ನ ಮಾಡಿದಲ್ಲಿ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಆಕಾಂಕ್ಷೆ ಇದ್ದಲ್ಲಿ ಸಮಾಜವನ್ನು ಬದಲಾಯಿಸಲು ಸಾಧ್ಯ ಎಂದು ಅವರು ಹೇಳಿದರು.
ಬಾರ್ಕೂರು ವಿದ್ಯಾಭಿವರ್ಧಿನಿ ಸಂಘದ ಅಧ್ಯಕ್ಷ ಬಿ.ಶಾಂತರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಉದ್ಯಮಿ ಎಸ್.ಶಿವರಾಮ ಹೆಗ್ಡೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಅಮೃತಮಹೋತ್ಸವ ಸಮಿತಿಯ ಅಧ್ಯಕ್ಷ ಬಿ.ರಾಜಾರಾಮ ಶೆಟ್ಟಿ, ಕಾರ್ಯದರ್ಶಿ ಎನ್.ಮಂಜುನಾಥ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಮಹೇಶ್ ಉಡುಪ,ವಿದ್ಯಾಭಿವರ್ಧಿನಿ ಸಂಘದ ಉಪಾಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ, ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಖಜಾಂಚಿ ಕೃಷ್ಣ ಹೆಬ್ಬಾರ್, ಕಾಲೇಜಿನ ಸಂಚಾಲಕ ಬಿ.ಗೋಪಾಲ ನಾಯ್ಕ, ಕಾಲೇಜಿನ ಪ್ರಾಂಶುಪಾಲ ಯು.ಕೊಟ್ರಸ್ವಾಮಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಹೇಮಾವತಿ ಪಿ.ಎಸ್ ಉಪಸ್ಥಿತರಿದ್ದರು.
ಬೆಳಗ್ಗೆ ನಡೆದ ಅಮೃತಮಹೋತ್ಸವ ಸಮಾರಂಭವನ್ನು ಬಾರ್ಕೂರು ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಸ್ವಾಮೀಜಿ ಉದ್ಘಾಟಿಸಿದ್ದರು.