ಪೆರ್ಣಂಕಿಲ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಜ.12 ರಂದು ಶಿಲಾನ್ಯಾಸ

ಉಡುಪಿ: ಪೆರ್ಣಂಕಿಲ ಶ್ರೀಮಹಾಲಿಂಗೇಶ್ವರ ಮತ್ತು ಶ್ರೀ ಮಹಾಗಣಪತಿ ದೇವಾಲಯವು ಅತ್ಯಂತ ಭವ್ಯ ಇತಿಹಾಸ ಹೊಂದಿರುವ ಅತ್ಯಂತ ಪುರಾತನವಾದ ದೇವಾಲಯಗಳಲ್ಲೊಂದಾಗಿದ್ದು ಇಲ್ಲಿ 10 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಜೀರ್ಣೋದ್ದಾರ ಕಾರ್ಯಗಳು ನಡೆಯಲಿವೆ ಎಂದು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್ ಹೇಳಿದ್ದಾರೆ.
ಸೋಮವಾರ ದೇವಸ್ಥಾನದಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜ.12 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಫೆ.23ರಂದು ಜೀರ್ಣೋದ್ದಾರ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಕೆಸರುಕಲ್ಲು ಮೂಹೂರ್ತದಂದು ಸ್ಥಳೀಯ 1000 ಮನೆಗಳಿಂದ ಕಲ್ಲು ಹಾಕಿಸಿ ಶಿಲನ್ಯಾಸ ಮಾಡಲಾಗುತ್ತದೆ ಎಂದರು.
ಕ್ಷೇತ್ರದ ಇತಿಹಾಸದ ಬಗ್ಗೆ ಮಾಹಿತಿ ನೀಡಿದ ಅವರು ಈಗಿನ ಶಿಲಾಮಯ ಗರ್ಭಗುಡಿಯುಅಳುಪ ರಾಣಿಯು ನಿರ್ಮಿಸಿರುವಳೆಂದು ಇಲ್ಲಿನ ಶಿಲಾಶಾಸನ ದಿಂದ ತಿಳಿದುಬರುತ್ತದೆ. ಅಳುಪ ಅರಸರು ಉತ್ತರಕನ್ನಡದಿಂದ ಪಯಸ್ವಿನೀ ನದಿಯ ಭಾಗದವರೆಗಿನ ತುಳುರಾಜ್ಯವನ್ನು ಕ್ರಿ.ಶ.567 ರಿಂದ ಕ್ರಿ.ಶ1325 ರವರೆಗೆ ಆಳುತ್ತಿದ್ದರು ಎಂದು ಇತಿಹಾಸದಲ್ಲಿ ತಿಳಿದುಬರುತ್ತದೆ. ಇಲ್ಲಿ ಗಣಪತಿ ದೇವರಿಗೆ ಸ್ವತಂತ್ರವಾದಂತಹ ದೇವಾಲಯವಿದ್ದು ಇದು ಬಹು ಅಪರೂಪ ದ್ದಾಗಿದೆ. ಇಲ್ಲಿಯ ಗಣಪತಿ ದೇವರು ’ಅಪ್ಪದ ದೇವರು’ ಎಂದೇ ಪ್ರಸಿದ್ಧಿ. ಭಕ್ತರು ವಿವಾಹ, ಸಂತಾನ, ಉದ್ಯೋಗಾದಿ ಅಭೀಷ್ಟ ಪ್ರಾಪ್ತಿಗಾಗಿ ಕೊಪ್ಪರಿಗೆಯ ಅಪ್ಪ ಎಂಬ ಒಂದು ಮುಡಿಯ ಅಪ್ಪವನ್ನು ದೇವರಿಗೆ ಹರಕೆಯ ರೂಪದಲ್ಲಿ ಸಮರ್ಪಿಸುವರು. ಪ್ರತಿನಿತ್ಯ ದೇವರಿಗೆ ’ಅಪ್ಪ’ ನೈವೇದ್ಯವನ್ನು ಸಮರ್ಪಿಸುವುದು ಇಲ್ಲಿನ ವೈಶಿಷ್ಟ್ಯ ಎಂದರು.
ಈ ಕಾರ್ಣಿಕ ಕ್ಷೇತ್ರವನ್ನು ಇಲ್ಲಿನ ಸಾಮಂತ ರಾಜರು ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಉಡುಪಿಯ ಶ್ರೀ ಪೇಜಾವರ ಮಠಾಧೀಶರ ಸುಪರ್ದಿಗೆ ವಹಿಸಿಕೊಟ್ಟಿರುವರು. ಆ ಕಾಲದಿಂದಲೂ ಶ್ರೀ ಮಠವೇ ಆಡಳಿತ ವ್ಯವಸ್ಥೆಯನ್ನು ನೆಡೆಸಿಕೊಂಡು ಬರುತ್ತಿದೆ. ಅಪೂರ್ವ ಇತಿಹಾಸ ಹೊಂದಿರುವ ಈ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸಬೇಕೆಂದು ಶ್ರೀವಿಶ್ವೇಶತೀರ್ಥ ಶ್ರೀಪಾದರು ಸಂಕಲ್ಪಿಸಿದ್ದರು. ಈಗ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಗುರುಗಳ ಆಶಯದಂತೆ ಜೀರ್ಣೋದ್ಧಾರದ ಪ್ರಕ್ರಿಯೆಗೆ ಮುಂದಾಗಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪೆರ್ಣಂಕಿಲ ಶ್ರೀಶ ನಾಯಕ್, ದಿವಾನರಾದ ಸುಬ್ರಮಣ್ಯ ಭಟ್ ಸಗ್ರಿ, ಸಾರ್ವಜನಿಕ ಸಂಪರ್ಕಾಧಿಕಾರಿ ಹರೀಶ್ ಸರಳಾಯ ಉಪಸ್ಥಿತರಿದ್ದರು.







