ಬಿಲ್ಲವರಿಗೆ ತಮ್ಮ ಸಾಂವಿಧಾನಿಕ ಹಕ್ಕು ಕಿತ್ತುಕೊಳ್ಳಲು ಗೊತ್ತಿದೆ: ಡಾ.ಪ್ರಣವಾನಂದ ಸ್ವಾಮೀಜಿ

ಉಡುಪಿ: ಬಿಲ್ಲವರು ತಮ್ಮ ಹಕ್ಕುಗಳನ್ನು ಕೇಳಿ ಆಗಿದೆ. ಇನ್ನು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳುವುದಕ್ಕೆ ನಮಗೆ ಗೊತ್ತಿದೆ. ಸಮುದಾಯ ಊರಿಗೆ ಬಂದು ಆಗಿದೆ. ಚುನಾವಣೆ ಸಂದರ್ಭ ದಾರಿ ತಪ್ಪಿಸುವುಕ್ಕೆ ಇದು ರಾಜಕೀಯ ಪಕ್ಷದ ಚುನಾವಣೆ ಅಲ್ಲ. ಬಿಲ್ಲವ ಸಮುದಾಯದ ಅಸ್ಮಿತೆಯ ಚುನಾವಣೆ. ಇದು ಸಮುದಾಯ ಹಕ್ಕುಗಳಿಗಾಗಿ ಹೋರಾಟ ಎಂದು ಕರದಾಳುವಿನ ಶ್ರೀನಾರಾಯಣ ಗುರುಶಕ್ತಿ ಪೀಠಾಧಿಪತಿ ಡಾ.ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.
ಮಂಗಳೂರಿನಿಂದ ಹೊರಟ ಸ್ವಾಮೀಜಿ ನೇತೃತ್ವದ ಪಾದಯಾತ್ರೆ ಸೋಮವಾರ ಸಂಜೆ ಉಡುಪಿ ತಲುಪಿದ್ದು, ಬನ್ನಂಜೆಯ ನಾರಾಯಣಗುರು ಸಭಾಭವನಕ್ಕೆ ಆಗಮಿಸಿ ತಂಗುವ ಮುನ್ನ ಬನ್ನಂಜೆ ಬಿಲ್ಲವರ ಸೇವಾ ಸಂಘದಲ್ಲಿ ನೆರೆದ ಸಮುದಾಯದವರನ್ನುದ್ದೇಶಿಸಿ ಮಾತನಾಡಿದರು.
ಬಿಲ್ಲವರು 70 ಲಕ್ಷ ಜನ ಇದ್ದಾರೆ. ಇವತ್ತು ಸಮುದಾಯ ಬೀದಿಗಿಳಿದು ಹೋರಾಡುವ ಸ್ಥಿತಿ ಇದೆ. ಸ್ವಾಮೀಜಿ ಸಮುದಾಯಕ್ಕೆ ಕೊಡುವ ಕೊಡುಗೆ ಏನು? ಸಮುದಾಯಕ್ಕೆ ಅನ್ಯಾಯ ಆಗಿದೆ. ಶೇಂದಿ ಅಮಲು ಪದಾರ್ಥವಲ್ಲ. ಅದು ಕೃಷಿಯ ಒಂದು ಬದುಕು. ಬಿಲ್ಲವ ಸಮುದಾಯಕ್ಕೆ ಮೀಸಲಾತಿ ಇಲ್ಲ. ಕುಲಕಸುಬುದಿಂದ ವಂಚಿತವಾಗಿದೆ ಎಂದು ಪ್ರಣವಾನಂದ ಸ್ವಾಮೀಜಿ ನುಡಿದರು.
ವಿಧಾನಸೌಧದ ಮುಂದೆ ನಾರಾಯಣ ಗುರುಗಳ ಪ್ರತಿಮೆ ಇಲ್ಲ. ಮೋದಿ ಕೂಡಾ ನಮನ ಸಲ್ಲಿಸಿಲ್ಲ. ಏಳು ಮಂದಿ ಶಾಸಕರು ಕುಲಬಾಂಧವರಿಂದ ಮತಪಡೆದು ಏನು ಮಾಡುತ್ತಿದ್ದೀರಿ..? ನಿಮ್ಮ ಕೆಲಸ ಏನು, ನಿಮ್ಮ ಜವಾಬ್ದಾರಿ ಏನು. 2023ರಲ್ಲಿ ನಮ್ಮ ಮತ ಬೇಡ ಎಂದು ಸ್ವಾಭಿಮಾನದಿಂದ ಹೇಳಿ. ನೀವು ಸಮುದಾಯದ ಬಗ್ಗೆ ಏನು ಮಾಡದೇ ಇರುವುದು ದೌರ್ಭಾಗ್ಯ. ನಿಮ್ಮ ಪಕ್ಷ, ಸಿದ್ಧಾಂತದ ವಿರೋಧವಲ್ಲ. ನಿಮ್ಮನ್ನು ಎಚ್ಷೆತ್ತು ಕೊಳ್ಳುವಂತೆ ಮಾಡಿಸುವುದು ನಮ್ಮ ಜವಾಬ್ದಾರಿ. ಕಳೆದ 3 ವರ್ಷಗಳಿಂದ ಕಾಲಹರಣ ಮಾಡಿ ಭರವಸೆ ಕೇಳಿ ಸಾಕಾಗಿದೆ. ಯಾಕೆ ಕ್ಯಾಬಿನೆಟ್ ಸೇರಿಸಿ ಘೋಷಣೆ ಯಾಕೆ ಮಾಡಿಲ್ಲ. ಆದೇಶ ಪತ್ರವಿಲ್ಲ. ನಿಮ್ಮ ರಾಜಕೀಯ ಸ್ಥಾನಮಾನಕ್ಕಾಗಿ ಸಮುದಾಯವನ್ನು ಬಲಿ ಪಡೆಯಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ವಿನಯ್ ಕುಮಾರ ಸೊರಕೆ ಮಾತನಾಡಿ, ನಾರಾಯಣ ಗುರುಗಳ ನಿಗಮ ಆಗಬೇಕು. ಬಡ್ಡಿ ರಹಿತ ಸಾಲ ನೀಡಬೇಕು. ನಾರಾಯಣ ಗುರುಗಳ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜ ಸುಧಾರಕರು. ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕೃತ ಮಾಡಿದ್ದು ಅವರ ವಿಚಾರಧಾರೆಗಳನ್ನು ಒಪ್ಪಿಕೊಂಡವರಿಗೆ ಮಾಡಿದ ಅಪಮಾನ. ಚುನಾವಣೆಗೆ ಎರಡು ತಿಂಗಳಿದ್ದು, ಬಜೆಟ್, ಅನುದಾನ, ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆಯ ಘೋಷಣೆ ಯಾವುದೂ ಮಂಜೂರು ಆಗಲ್ಲ. ಬಿಲ್ಲವ ಸಮಾಜಕ್ಕೆ ಆಗುವ ನೋವಿಗೆ ಯಾರು ಸ್ಪಂದಿಸುತ್ತಿಲ್ಲ. ಸಮಾಜದ ಬೇಡಿಕೆಗಾಗಿ ನಡೆಯುವ ಈ ಪಾದಯಾತ್ರೆ, ಈ ಹೋರಾಟದ ಕಿಚ್ಚು ಬೆಂಗಳೂರು ವಿಧಾನಸೌಧ ಮುಟ್ಟಬೇಕೆಂದರು.
ಮುಖಂಡರಾದ ದಿವಾಕರ ಸನಿಲ್, ರಾಘವೇಂದ್ರ ಅಮೀನ್, ರಾಜಶೇಖರ ಕೋಟ್ಯಾನ್, ಅಶ್ವಿತ್ ಸುವರ್ಣ, ಮಾಧವ ಬನ್ನಂಜೆ, ವಿಶು ಕುಮಾರ ಪೂಜಾರಿ, ಸಂತೋಷ್ ಬೈರಂಪಳ್ಳಿ ಉಪಸ್ಥಿತರಿದ್ದರು.







