ಕಾಶ್ಮೀರದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಹಮಾನ್ ರಾಹಿ ನಿಧನ

ಶ್ರೀನಗರ,ಜ.9: ಖ್ಯಾತ ಕವಿ,ವಿಮರ್ಶಕ ಮತ್ತು ವಿದ್ವಾಂಸ ಪ್ರೊ.ಅಬ್ದುಲ್ ರಹಮಾನ್ ರಾಹಿ(Prof. Abdul Rehman Rahi) (98) ಅವರು ಸೋಮವಾರ ಇಲ್ಲಿ ನಿಧನರಾದರು. 2007ರಲ್ಲಿ ತನ್ನ ‘ಸಿಯಾಹ್ ರೂದ್ ಜೇರೆನ್ ಮಾಂಝ್ ’(Siyah Rood Jaeren Manz)ಕವನ ಸಂಕಲನಕ್ಕಾಗಿ 2004 ರ ದೇಶದ ಅತ್ಯುನ್ನತ ಸಾಹಿತ್ಯ ಪುರಸ್ಕಾರ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದ ಅವರು ಈ ಪ್ರಶಸ್ತಿಯನ್ನು ಗಳಿಸಿದ ಮೊದಲ ಕಾಶ್ಮೀರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ತನ್ನ ‘ನವರೋಜ್-ಎ-ಸಬಾ ’ಕವನ ಸಂಕಲನಕ್ಕಾಗಿ 1961ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದ ಅವರು,2000ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಓರ್ವ ಅನುವಾದಕರಾಗಿ ರಾಹಿ ಬಾಬಾ ಫರೀದ್ ಅವರ ಸೂಫೀ ಕಾವ್ಯವನ್ನು ಮೂಲ ಪಂಜಾಬಿಯಿಂದ ಕಾಶ್ಮೀರಿ ಭಾಷೆಗೆ ಅತ್ಯುತ್ತಮವಾಗಿ ಅನುವಾದಿಸಿದ್ದರು.
ರಾಹೀ ಅವರ ಕವನಗಳಲ್ಲಿ ಆಲ್ಬರ್ಟ್ ಕಾಮೂ ಮತ್ತು ಜಾನ್ ಪಾಲ್ ಸಾರ್ತ್ರೆ ಅವರ ಕೆಲ ಪ್ರಭಾವಗಳು ಗೋಚರವಾಗಿದ್ದರೆ, ಆರಂಭದ ದಿನಗಳಲ್ಲಿ ಅವರ ಕವನಗಳು ದೀನಾನಾಥ್ ಕೌಲ್ ‘ನಾಡಿಮ್’ ಅವರಿಂದ ಪ್ರಭಾವಿತಗೊಂಡಿದ್ದವು.





