ಪಂಚಮಸಾಲಿ ಮೀಸಲಾತಿ ವಿಚಾರ: ಸರಕಾರಕ್ಕೆ ಮತ್ತೆ ಗಡುವು ನೀಡಿದ ಬಸವ ಜಯ ಮೃತ್ಯುಂಜಯ ಶ್ರೀ

ಹುಬ್ಬಳ್ಳಿ, ಜ. 9: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಜ.12ರ ಒಳಗಾಗಿ ಸಂಪೂರ್ಣ 2 ‘ಎ’ ಮೀಸಲಾತಿ ಪ್ರಕಟಿಸಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು. ಇಲ್ಲವಾದಲ್ಲಿ ಜ.13ರಂದು ಶಿಗ್ಗಾಂವಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಬಸವರಾಜ ಬೊಮ್ಮಾಯಿ ಅವರು ಬೆಳಗಾವಿ ಅಧಿವೇಶನದಲ್ಲಿ ಕೊಟ್ಟ ಮಾತು ತಪ್ಪಿದ್ದಾರೆ. ಈಗಾಗಲೇ ಅವರು ಹೇಳಿರುವ 2 ‘ಡಿ’ ಮೀಸಲಾತಿ ನಮಗೆ ತೃಪ್ತಿ ತಂದಿಲ್ಲ, 2 ‘ಡಿ’ ಮೀಸಲಾತಿಯು ಗೊಂದಲ ಉಂಟು ಮಾಡಿದೆ. ನಮಗೆ ಸಂಪೂರ್ಣ 2 ‘ಎ’ ಮೀಸಲಾತಿ ಬೇಕು, ಅದರಲ್ಲಿ ಇರುವ 102 ಸಮಾಜಕ್ಕೆ ಸಿಗುವಂತಹದ ಸೌಲಭ್ಯಗಳು ಪಂಚಮಸಾಲಿ ಸಮಾಜಕ್ಕೂ ಸಿಗಬೇಕು ಎಂದು ಶ್ರೀಗಳು ಹೇಳಿದರು.
2 ‘ಎ’ ಮೀಸಲಾತಿ ಕೊಡುತ್ತೇವೆ ಎಂದು ಆರು ಬಾರಿ ಮಾತು ಕೊಟ್ಟಿದ್ದಾರೆ. ಆದರೆ, ಮಾತು ಕೊಟ್ಟ ಹಾಗೆ ಅವರು ನಡೆದುಕೊಂಡಿಲ್ಲ, ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಲೇಬೇಕಾಗಿದೆ. ನಮ್ಮ ಸಮಾಜದ ಬಡ ಮಕ್ಕಳ ಕಣ್ಣೀರು ಒರೆಸಲು ನಾವು ಹೋರಾಟ ಮಾಡಬೇಕಿದೆ. ನಮಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದರು.
ಲಿಂಗಾಯತ ಸಮುದಾಯದ ಒಳಜಾತಿಗಳ ಎಲ್ಲರನ್ನೂ ಒಳಗೊಂಡ ಮೀಸಲಾತಿ ನೀಡುತ್ತಿರೋ? ಅಥವಾ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲಾಗುತ್ತಿದೆಯೋ ಎಂದು ಸ್ಪಷ್ಟಪಡಿಸಲಿ. ನಮಗೆ ಮೀಸಲಾತಿ ಘೋಷಣೆ ಮಾಡಿದ್ದು ಗೊಂದಲ ಆಗಿದೆ. ನಮಗೂ ಮೀಸಲಾತಿ ಘೋಷಣೆಯ ಆದೇಶ ಪತ್ರವನ್ನ ನೀಡಿ. ಅದನ್ನ ನಾವು ಸ್ವಾಗತ ಮಾಡಬೇಕೋ, ತಿರಸ್ಕರಿಸಬೇಕೋ ಎಂಬುದು ತೀರ್ಮಾನ ಮಾಡುತ್ತೇವೆ ಎಂದರು.







