ಪಾಕಿಸ್ತಾನದಲ್ಲಿ ಗುಟ್ಕಾ ಫ್ಯಾಕ್ಟರಿ ಸ್ಥಾಪನೆಗೆ ದಾವೂದ್ ಇಬ್ರಾಹೀಂಗೆ ನೆರವಾಗಿದ್ದ ಉದ್ಯಮಿಗೆ 10 ವರ್ಷಗಳ ಜೈಲುಶಿಕ್ಷೆ

ಮುಂಬೈ,ಜ.9: ಪಾಕಿಸ್ತಾನದ ಕರಾಚಿಯಲ್ಲಿ ಗುಟ್ಕಾ ಫ್ಯಾಕ್ಟರಿಯನ್ನು ಸ್ಥಾಪಿಸಲು ದೇಶಭ್ರಷ್ಟ ಗ್ಯಾಂಗ್ ಸ್ಟರ್ ದಾವೂದ್ ಇಬ್ರಾಹೀಂ(Dawood Ibrahim) ಮತ್ತು ಆತನ ಸಹಚರರಿಗೆ ನೆರವಾಗಿದ್ದ ಪ್ರಕರಣದಲ್ಲಿ ‘ಗೋವಾ ’ಗುಟ್ಕಾ ತಯಾರಕ ಜೆ.ಎಂ ಜೋಶಿ ಮತ್ತು ಇತರ ಇಬ್ಬರಿಗೆ ಮುಂಬೈನ ವಿಶೇಷ ನ್ಯಾಯಾಲಯವು ಸೋಮವಾರ 10 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ.
ಜೋಶಿ,ಜಮೀರುದ್ದೀನ್ ಅನ್ಸಾರಿ ಮತ್ತು ಫಾರೂಖ್ ಮನ್ಸೂರಿ ಅವರು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಮ್ಕೋಕಾ) ಮತ್ತು ಐಪಿಸಿಯಡಿ ದೋಷಿಗಳಾಗಿದ್ದಾರೆ ಎಂದು ವಿಶೇಷ ನ್ಯಾಯಾಧೀಶ ಬಿ.ಡಿ.ಶೆಳ್ಕೆ ಅವರು ಘೋಷಿಸಿದರು.
ಪ್ರಾಸಿಕ್ಯೂಷನ್ ಪ್ರಕಾರ ಜೋಶಿ ಹಾಗೂ ಸಹಆರೋಪಿ ರಸಿಕಲಾಲ್ ಧಾರಿವಾಲ್ ನಡುವೆ ಹಣಕಾಸು ವಿವಾದವಿತ್ತು ಮತ್ತು ಅದನ್ನು ಬಗೆಹರಿಸಲು ಅವರು ದಾವೂದ್ನ ನೆರವನ್ನು ಕೋರಿದ್ದರು. ವಿವಾದ ಇತ್ಯರ್ಥಕ್ಕೆ ಪ್ರತಿಯಾಗಿ 2002ರಲ್ಲಿ ಕರಾಚಿಯಲ್ಲಿ ಗುಟ್ಕಾ ಫ್ಯಾಕ್ಟರಿಯನ್ನು ಸ್ಥಾಪಿಸಲು ದಾವೂದ್ ಅವರಿಬ್ಬರ ನೆರವು ಕೇಳಿದ್ದ.
ಧಾರಿವಾಲ್ ವಿಚಾರಣೆಯ ಸಂದರ್ಭದಲ್ಲಿ ಮೃತಪಟ್ಟಿದ್ದು, ದಾವೂದ್ ಪ್ರಕರಣದಲ್ಲಿ ಅಪೇಕ್ಷಿತ ಆರೋಪಿಯಾಗಿದ್ದಾನೆ.







