ಯುವ ರೆಡ್ ಕ್ರಾಸ್ ಮಂಗಳೂರು ವಿಶ್ವವಿದ್ಯಾನಿಲಯದ ಘನತೆ ಹೆಚ್ಚಿಸಿದೆ: ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ

ಕೊಣಾಜೆ: ಸೇವೆಯಲ್ಲಿ ಯಾವುದೇ ಸ್ವಾರ್ಥ, ಬೇಧಭಾವ ಇರಬಾರದು, ಆದರೆ ಪ್ರೀತಿಯಿರಬೇಕು. ನಾವು ಯಾವತ್ತೂ ಎಲ್ಲರನ್ನೂ ಖುಷಿಪಡಿಸಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಕಾರ್ಯತಂತ್ರ ಬದಲಾಗಬೇಕೇ ಹೊರತು, ಗುರಿಯಲ್ಲ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟರು.
ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭಾಂಗಣದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಭಾರತೀಯ ರೆಡ್ ಕ್ರಾಸ್ ಸೊಸೈಟಿ ನಡುವಿನ ತಿಳುವಳಿಕೆ ಪತ್ರ (ಎಂಒಯು) ಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಬರೀ ಭಾಷಣ ಮಾಡದೆ ಇತರರಿಗೆ ಪ್ರೇರಣೆ ನೀಡುವಂತವರಾಗಬೇಕು. ಜನರನ್ನು ತಲುಪಲು, ನಿಸ್ವಾರ್ಥ ಸೇವೆಯಲ್ಲಿ ತೊಡಗಲು ಯುವ ರೆಡ್ ಕ್ರಾಸ್ ಅತ್ಯುತ್ತಮ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿದೆ, ಎಂದರು.
“ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯ ಬಳಿ ನಿರ್ಮಾಣವಾಗುತ್ತಿರುವ ʼರೆಡ್ ಕ್ರಾಸ್ ಭವನʼಕ್ಕೆ ರೂ. 10 ಲಕ್ಷ ನೀಡಲು ವಿವಿಯ ಸಿಂಡಿಕೇಟ್ ಒಪ್ಪಿದೆ. ಈ ಕಟ್ಟಡದ ಮೂಲಕ ಕರ್ತವ್ಯಕ್ಕೆ ಪ್ರೇರಕ ವಾತಾವರಣ ಮೂಡಲಿ. ಮಂಗಳೂರು ವಿಶ್ವವಿದ್ಯಾನಿಲಯದ ಕಾರ್ಯಕ್ರಮಗಳ ಆಯೋಜನೆಗೂ ಕಟ್ಟಡ ನೆರವಾಗಲಿದೆ. ಯುವ ರೆಡ್ ಕ್ರಾಸ್ ಮಂಗಳೂರು ವಿಶ್ವವಿದ್ಯಾನಿಲಯದ ಘನತೆ ಹೆಚ್ಚಿಸಿದೆ,” ಎಂದರು.
ಭಾರತೀಯ ರೆಡ್ ಕ್ರಾಸ್ನ ಗೌರವ ಕಾರ್ಯದರ್ಶಿ ಕುಸುಮಾಧರ ಬಿಕೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿಕೆ ಒಪ್ಪಂದಕ್ಕೆ ಸಹಿ ಹಾಕಿದರು. ಕುಲಸಚಿವರು ಎಲ್ಲರನ್ನೂ ಸ್ವಾಗತಿಸಿದರೆ, ರೆಡ್ ಕ್ರಾಸ್ ಜಿಲ್ಲಾಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ನಿವೃತ್ತ ಎಡಿಸಿ ಪ್ರಭಾಕರ ಶರ್ಮಾ, ಮಂಗಳೂರು ವಿವಿ ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್ ಧರ್ಮ, ಹಣಕಾಸು ಅಧಿಕಾರಿ ಡಾ. ಸಂಗಪ್ಪ ವೈ, ಕಲಾ ನಿಖಾಯದ ಡೀನ್ ಪ್ರೊ, ಜಯರಾಜ್ ಅಮೀನ್, ವಿಜ್ಞಾನ ನಿಖಾಯದ ಡೀನ್ ಪ್ರೊ. ಎಂ ಜಯಶಂಕರ್, ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ ಮೊದಲಾದವರು ಉಪಸ್ಥಿತರಿದ್ದರು.