ಸಕಲೇಶಪುರ: ಮೀನು ಹಿಡಿಯಲು ಹೋದ ವ್ಯಕ್ತಿ ಅಪರಿಚಿತರ ಗುಂಡೇಟಿಗೆ ಬಲಿ, ಇನ್ನಿಬ್ಬರಿಗೆ ಗಾಯ

ಸಕಲೇಶಪುರ, ಜ.10: ಮೀನು ಹಿಡಿಯಲು ಹೋಗಿದ್ದ ವೇಳೆ ಅಪರಿಚಿತರು ಹಾರಿಸಿದ ಗುಂಡಿಗೆ ವ್ಯಕ್ತಿಯೋರ್ವ ಬಲಿಯಾಗಿ, ಇಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಯಸಳೂರು ಹೋಬಳಿ ತಂಬಲಗೇರಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ತಂಬಲಗೇರಿಯ ನವೀನ್ ಅಲಿಯಾಸ್ ಪಚ್ಚಿ (39) ಮೃತಪಟ್ಟ ವ್ಯಕ್ತಿ. ಇದೇವೇಳೆ ಜೊತೆಗಿದ್ದ ದಯಾನಂದ ಹಾಗೂ ಪದ್ಮನಾಭ ಎಂಬುವರಿಗೂ ಗುಂಡು ತಗುಲಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗಿದ್ದ ಮತ್ತೋರ್ವ ಯುವಕ ರಾಜಾಚಾರಿಗೆ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ನಾಲ್ವರು ಸ್ನೇಹಿತರು ಜೊತೆಗೂಡಿ ತಂಬಲಗೇರಿಯ ಹೇಮಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದರು. ಈ ವೇಳೆ ಯಾರೋ ಹಾರಿಸಿದ ಗುಂಡು ತಗುಲಿ ನವೀನ್ ಮೃತಪಟ್ಟಿದ್ದಾರೆನ್ನಲಾಗಿದೆ. ಇದು ಈ ಭಾಗದಲ್ಲಿ ಕಾಡುಪ್ರಾಣಿಗಳ ಶಿಕಾರಿ ನಡೆಸುವವರು ಹಾರಿಸಿದ ಗುಂಡು ಆಕಸ್ಮಿಕವಾಗಿ ತಗುಲಿದ್ದೆ ಅಥವಾ ಉದ್ದೇಶಪೂರ್ವಕ ಕೃತ್ಯವೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹತ್ಯೆಗೀಡಾದ ನವೀನ್ ಬಿಜೆಪಿ ಕಾರ್ಯಕರ್ತರಾಗಿದ್ದಲ್ಲದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಹಾಗೂ ನಾಲ್ಕು ವರ್ಷದ ಮಗುವನ್ನು ಅಗಲಿದ್ದಾರೆ.







