ತಲಪಾಡಿ | 4 ಕೆ.ಜಿ. ಗಾಂಜಾ ಸಹಿತ ಓರ್ವನ ಬಂಧನ, ಇನ್ನೋರ್ವ ಪರಾರಿ

ಉಳ್ಳಾಲ, ಜ.9: ಬೈಕ್‌ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಓರ್ವನನ್ನು ಉಳ್ಳಾಲ ಪೊಲೀಸರು ಸೋಮವಾರ ಬಂಧಿಸಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ.
ಮಂಜೇಶ್ವರ ಸಮೀಪದ ಪುರುಷಂಗೋಡಿ ನಿವಾಸಿ ಮುಹಮ್ಮದ್ ರಾಝಿಕ್ ಬಂಧಿತ ಆರೋಪಿ. ಈತನಿಂದ 40 ಸಾವಿರ ರೂ. ಮೌಲ್ಯದ 4 ಕೆ.ಜಿ. ಗಾಂಜಾ ಹಾಗೂ ಸಾಗಾಟಕ್ಕೆ ಬಳಸಿದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗಿದ್ದ ಆರೋಪಿ ಮೊರ್ತಣೆ ನಿವಾಸಿ ಅಸ್ಗರ್ ಎಂಬಾತ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಯುವಕರು ಬೈಕ್‌ನಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಉಳ್ಳಾಲ ಪೊಲೀಸರು ತಲಪಾಡಿ ಗ್ರಾಮದ ತಚ್ಚಣಿ ಬಳಿ ಬೈಕ್‌ನ್ನು ಅಡ್ಡಗಟ್ಟಿ ಓರ್ವನನ್ನು ಬಂಧಿಸಿದ್ದಾರೆ.
ಉಳ್ಳಾಲ ಠಾಣೆಯ ಇನ್ ಸ್ಪೆಕ್ಟರ್ ಸಂದೀಪ್ ಮಾರ್ಗದರ್ಶನದಲ್ಲಿ ಪಿಎಸ್ಸೈಗಳಾದ ರೇವಣ ಸಿದ್ದಪ್ಪ, ಪ್ರದೀಪ್ ಟಿ.ಆರ್., ಶಿವಕುಮಾರ್ ಹಾಗೂ ಸಿಬ್ಬಂದಿಯಾದ ರಂಜಿತ್, ಉದಯ, ಅಶೋಕ, ಅಕ್ಬರ್, ಸಾಗರ, ವಾಸುದೇವ, ಸತೀಶ್, ಚಿದಾನಂದ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದಾರೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.