ಕುಂದಾಪುರ: ಎಸ್ಸಿ-ಎಸ್ಟಿ ಸಭೆ ಕರೆಯದ ಬಗ್ಗೆ ದಲಿತ ಸಂಘಟನೆಗಳ ಆಕ್ರೋಶ

ಕುಂದಾಪುರ: ಮೂರು ತಿಂಗಳಿಗೊಮ್ಮೆ ದಲಿತರ ಕುಂದು ಕೊರತೆ ಸಭೆ ನಡೆಸಬೇಕು ಎನ್ನುವ ಸರಕಾರದ ಸುತ್ತೋಲೆಯಿದ್ದರೂ ಕಳೆದ ಮೂರು ವರ್ಷದಿಂದ ಸಭೆ ನಡೆಸಿಲ್ಲ. ತಾಲೂಕು,ಜಿಲ್ಲಾ ಮಟ್ಟದಲ್ಲಿ ಸಭೆ ನಡೆಯುತ್ತಿಲ್ಲ. ಸಭೆ ನಡೆಯದಿರುವುದರಿಂದ ಸಾಕಷ್ಟು ವಿಷಯಗಳು ಚರ್ಚೆಯಾಗದೆ ಸಮಸ್ಯೆ ಇತ್ಯರ್ಥ ಆಗುತ್ತಿಲ್ಲ. ಸಭೆ ಕರೆಯುವಂತೆ ಪದೇ ಪದೇ ಮಾಹಿತಿ ನೀಡಿದರೂ ನಿರ್ಲಕ್ಷಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎದುರು ದಲಿತ ಮುಖಂಡರು ಆಕ್ರೋಶ ಹೊರ ಹಾಕಿದರು.
ಕುಂದಾಪುರದ ಮಿನಿವಿಧಾನಸೌಧದಲ್ಲಿ ಇಂದು ನಡೆದ ಸಚಿವರ ಅಹವಾಲು ಸ್ವೀಕಾರದ ವೇಳೆ ಸಚಿವರನ್ನು ಭೇಟಿಯಾದ ಭೀಮಘರ್ಜನೆ ರಾಜ್ಯ ಸಂಚಾಲಕ ಉದಯ ಕುಮಾರ ತಲ್ಲೂರು ನೇತೃತ್ವದ ನಿಯೋಗ, ಹಲವಾರು ಸಮಸ್ಯೆ ಗಳನ್ನು ಸಚಿವರ ಗಮನಕ್ಕೆ ತಂದರು.
ಜಿಲ್ಲಾಡಳಿತ ದಲಿತರನ್ನು ಕತ್ತಲೆಯಲ್ಲಿಟ್ಟಿದೆ. ದೌರ್ಜನ್ಯ ಪ್ರಕರಣಗಳ ಎಸ್ಸಿಎಸ್ಟಿ ಕಾಯಿದೆ ಪ್ರಕಾರ ಬಿ ರಿಪೋರ್ಟ್ ಹಾಕುವುದಕ್ಕೆ ಅವಕಾಶ ಇಲ್ಲದಿದ್ದರೂ ಪೊಲೀಸರು ಪ್ರಕರಣ 173ಗೆ ಕನ್ವರ್ಟ್ ಮಾಡಿ ಬಿ ರಿಪೋರ್ಟ್ ಹಾಕಿದ್ದಾರೆ. ಶಂಕರನಾರಾಯಣದಲ್ಲಿ ಪರಿಶಿಷ್ಟ ಜಾತಿ ಪಂಗಡದ ಕೋಟ್ಯಾಂತರ ರೂ. ಅನುದಾನ ದುರುಪಯೋಗವಾಗಿ, ಭ್ರಷ್ಟಾಚಾರ ಎಸಗಿದ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಲಿಖಿತ ದೂರು ನೀಡಿದ್ದರೂ, ಇಲ್ಲಿಯವರೆಗೆ ಯಾವುದೆ ತನಿಖೆ ಮಾಡದೆ, ದುರುಪಯೋಗ ಮಾಡಿಕೊಂಡವರ ಮೇಲೆ ಯಾವುದೆ ಕಾನೂನು ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದವರು ದೂರಿದರು.
ಈ ಬಗ್ಗೆ ತಮಗೂ ನಾವು ದೂರು ನೀಡಿದ್ದರು ಸಹ ಗಮನ ಹರಿಸಿಲ್ಲ. ಇನ್ನು ಐದು ಮೀನುಗಾರಿಕಾ ಮನೆಗಳಿಗೆ ತಲ್ಲೂರು ಗ್ರಾಪಂನಿಂದ ಶಿಪಾರಸ್ಸು ಮಾಡಿ ಕಳುಹಿಸಿದ್ದರೂ ಇಲಾಖೆಯವರು ಅರ್ಜಿಗಳೆ ಬಂದಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಇದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀನುಗಾರಿಕಾ ಮನೆ ಸಿಗುತ್ತಿಲ್ಲ. ಐದು ಲಕ್ಷದ ಮನೆ ನೀಡುತ್ತೇನೆಂದು ಭರವಸೆ ನೀಡಿದ್ದು, ಭರವಸೆಯಾಗಿಯೆ ಉಳಿದಿದೆ ಎಂದವರು ಖಾರವಾಗಿ ನುಡಿದರು.
ಕೋಟೇಶ್ವರದ ಕಾಗೇರಿ ಬಳಿ ಪರಿಶಿಷ್ಟ ಪಂಗಡದ ಕಾಲನಿ ಸಮೀಪದಲ್ಲೇ ಇದ್ದು, ಆಕ್ಷೇಪ ಸಲ್ಲಿಸಿದ್ದರೂ, ಅಬಕಾರಿ ಇಲಾಖೆ ಸುಳ್ಳು ವರದಿ ತಯಾರು ಮಾಡಿ ಅಲ್ಲಿ ಮದ್ಯ ಮಳಿಗೆಗೆ ಪರವಾನಿಗೆ ನೀಡಿದ್ದಾರೆ. ಹಾಗಾದರೆ ಜಿಲ್ಲೆಯಲ್ಲಿ ದಲಿತರ ಧ್ವನಿಗೆ ಬೆಲೆ ಇಲ್ಲವೆ ? ಎಂದು ದಲಿತ ಮುಖಂಡರಾದ ಉದಯ ಕುಮಾರ ತಲ್ಲೂರು ಹಾಗೂ ಚಂದ್ರಮ ತಲ್ಲೂರು, ವಿಜಯ್ ಕೆ ಎಸ್ ಕುಂದಾಪುರ ಸಚಿವರ ಗಮನ ಸೆಳೆದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿ, ಎಸ್ಸಿಎಸ್ಟಿ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗುತ್ತದೆ. ಮೀನುಗಾರಿಕಾ ಮನೆಗಳ ಬೇಡಿಕೆ ಇಲಾಖೆಗೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಅರ್ಜಿ ಹಾಕಿದವರಿಗೆ ಮನೆ ಕೊಡಲಾಗಿದೆ. ಅರ್ಜಿ ನೇರವಾಗಿ ನನಗೆ ಕೊಟ್ಟರೆ ಫಾಲೋಅಪ್ ಮಾಡುತ್ತೇನೆ, ಸಚಿವನಾಗಿ ನಾನು ಐದು ಲಕ್ಷದ ಮನೆ ಘೋಷಣೆ ಮಾಡಿದ್ದು ನಿಜ. ಆದರೆ ಅದಕ್ಕೆ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕಿಲ್ಲ. ಆದರೂ ನಾನು ಅದಕ್ಕೆ ಇನ್ನೆರಡು ಲಕ್ಷ ಒಟ್ಟುಗೂಡಿಸಿ ಅನುಮೋದನೆ ಪಡೆದು ಜಾರಿಗೆ ತರುತ್ತೇನೆ ಎಂದರು.
ಶಂಕರನಾರಾಯಣದ ಪ್ರಕರಣ ವಿಚಾರಿಸುತ್ತೇನೆ. ಹಾಗೆ ಅಬಕಾರಿ ವಿಷಯ ದಲ್ಲಿ ಕಡತ ಪರಿಶೀಲಿಸಿ ಅಬಕಾರಿ ಮಂತ್ರಿಗಳಲ್ಲಿ ಮಾತನಾಡಿ ಸಮಸ್ಯೆಯನ್ನ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.







