ಮಂಗಳೂರು: ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಬೈಪಾಸ್ ಸರ್ಜರಿ ರಹಿತ ಹೃದಯ ಕವಾಟು ಬದಲಿ ಚಿಕಿತ್ಸೆ
ಇಂಡಿಯಾನ ಆಸ್ಪತ್ರೆಯ ಮತ್ತೊಂದು ಮಹತ್ಸಾಧನೆ

ಮಂಗಳೂರು: ಇಲ್ಲಿನ ಪಂಪ್‌ವೆಲ್ ಬಳಿ ಇರುವ ಇಂಡಿಯಾನ ಆಸ್ಪತ್ರೆ ಹಾಗೂ ಹೃದಯ ಚಿಕಿತ್ಸಾ ಸಂಸ್ಥೆಯು ಬೈಪಾಸ್ ಸರ್ಜರಿ ಇಲ್ಲದೆಯೇ ರೋಗಿಯೊಬ್ಬರ ಹೃದಯದ ಕವಾಟು ಬದಲಿಸುವ ಮೂಲಕ ಮತ್ತೊಂದು ಸಾಧನೆ ಮಾಡಿದ ಶ್ರೇಯಸ್ಸನ್ನು ತನ್ನದಾಗಿಸಿಕೊಂಡಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಜನವರಿ 8 ರಂದು ಇಲ್ಲಿ ಹೃದಯ ಸಂಬಂಧಿ ಚಿಕಿತ್ಸೆಗಾಗಿ ದಾಖಲಾಗಿದ್ದ ಕೀನ್ಯಾದ ರೋಗಿಯೊಬ್ಬರಿಗೆ ಬೈ ಪಾಸ್ ಸರ್ಜರಿ ಇಲ್ಲದೆಯೇ ಯಶಸ್ವಿಯಾಗಿ ಹೃದಯದ ಕಪಾಟನ್ನು ಬದಲಿಸಲಾಯಿತು. ಆಕೆಗೆ ಟ್ರಾನ್ಸ್‌ಕ್ಯಾಥೆಟರ್ ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು, ಕನಿಷ್ಠ ಅಪಾಯಕಾರಿ ಕಾರ್ಯವಿಧಾನದ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಇಂಡಿಯಾನ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಯೂಸುಫ್.ಎ. ಕುಂಬ್ಳೆ ಸುದ್ದಿಗಾರರಿಗೆ ಮಂಗಳವಾರ ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ಭಾಷೆಯಲ್ಲಿ ಮೈಟ್ರಲ್ ವಾಲ್ವ್’ ಎಂದು ಕೆರೆಯಲಾಗುವ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕೀನ್ಯಾದ 65 ವರ್ಷದ ಮಹಿಳಾ ರೋಗಿಯು ಈ ಮೊದಲು 2014ರಲ್ಲಿ ಅಹ್ಮದಾಬಾದ್ ನಲ್ಲಿ ಬೈಪಾಸ್ ಹಾರ್ಟ್ ಸರ್ಜರಿಗೆ ಒಳಗಾಗಿ, ತಮ್ಮ ಹೃದಯಕ್ಕೆ ಕೃತಕ ಕವಾಟನ್ನು ಅಳವಡಿಸಿಕೊಂಡಿದ್ದರು.
8 ವರ್ಷಗಳ ಬಳಿಕ ಆಕೆಯ ಹೃದಯದ ಕೃತಕ ಕವಾಟು ಕಾರ್ಯನಿರ್ವಹಿಸಲು ಸಮಸ್ಯೆ ಕಾಣಿಸಿಕೊಂಡಿತು. ಇದರಿಂದಾಗಿ ಆಕೆಗಿದ್ದ ಹೃದಯ ಸಂಬಂಧಿ ಕಾಯಿಲೆ ಮತ್ತಷ್ಟು ಉಲ್ಬಣಗೊಂಡು, ಅಕೆಗೆ ತೀವ್ರತರದ ಉಸಿರಾಟದ ಸಮಸ್ಯೆ ಮತ್ತು ತೀವ್ರ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳತೊಡಗಿತ್ತು.ಆಗ ಆಕೆ ಈ ಮೊದಲು ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದ ಅಹ್ಮದಾಬಾದ್‌ನ ಅದೇ ಆಸ್ಪತ್ರೆಯನ್ನು ಸಂಪರ್ಕಿಸಿದಾಗ ಅಲ್ಲಿನ ವೈದ್ಯರು ಪುನಃ ಓಪನ್ ಹಾರ್ಟ್ ಬೈಪಾಸ್ ಸರ್ಜರಿ (ತೆರೆದ ಹೃದಯ ಶಸ್ತ್ರಚಿಕಿತ್ಸೆ) ಮಾಡಬೇಕು. ಇದರ ಹೊರತು ಬೇರೆ ಯಾವುದೇ ದಾರಿ ಇಲ್ಲ ಎಂದು ಹೇಳಿರುವುದಾಗಿ ಆಕೆಯ ಪುತ್ರ ಅದಾನ್ ತಿಳಿಸಿದರು.
ಈ ಮಧ್ಯೆ ಅವರು ಮಂಗಳೂರಿನ ಇಂಡಿಯಾನ ಆಸ್ಪತ್ರೆಯ ಇಲ್ಲಿನ ಮುಖ್ಯಸ್ಥ ಡಾ. ಯೂಸುಫ್ ಕುಂಬ್ಳೆಯನ್ನು ಸಂಪರ್ಕಿಸಿ, ರೋಗಿಯ ಗಂಭೀರ ಸ್ಥಿತಿಯ ಕುರಿತು ಮಾಹಿತಿ ನೀಡಿದ್ದೆವು. ಆಗ, ಡಾ.ಯೂಸುಫ್ ಕುಂಬ್ಳೆಯವರು, ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗದೆ, ಇಂಟರ್ ವೆನ್ಷನಲ್ ಟೆಕ್ನಿಕ್ ನ ಮೂಲಕ (ಹಳೆಯ ಕವಾಟನ್ನು ತೆಗೆಯದ ಬೇರೆ ಕವಾಟನ್ನು ಅಳವಡಿಸುವ ಮಧ್ಯಂತರ ಪರ್ಯಾಯ ಚಿಕಿತ್ಸೆ) ವಾಲ್ಟ್ ಅನ್ನು ಬದಲಾಯಿಸಬಹುದು ಎಂಬುದಾಗಿ ನಮಗೆ ಭರವಸೆ ನೀಡಿದರು ಎಂದು ಅದಾನ್ ನುಡಿದರು.
ಎರಡನೇ ಬಾರಿ ಬೈಪಾಸ್ ಸರ್ಜರಿ ತುಂಬಾ ಅಪಾಯಕಾರಿಯಾಗಿದೆ. ಅದರಿಂದ ಬದುಕುಳಿಯುವ ಅವಕಾಶ ತೀರಾ ಕಮ್ಮಿ ಎಂಬುದು ಯೂಸುಫ್ ಕುಂಬ್ಳೆ ಅವರ ಅಭಿಪ್ರಾಯ.
ಕವಾಟದೊಳಗೆ ಕವಾಟನ್ನು ಅಳವಡಿಸುವ ಹೃದಯ ಚಿಕಿತ್ಸೆಯ ಈ ಕಾರ್ಯವಿಧಾನವು ಬಹಳ ಅಪರೂಪದ್ದಾಗಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಟ್ರಾನ್ಸ್ ಕ್ಯಾತಿಟರ್ ಪಲ್ಮ್ಮ್‌ನರಿ ವಾಲ್ಟ್ ರಿಪ್ಲೇಸ್ ಮೆಂಟ್ ಎಂದು ಕರೆಯಲಾಗುತ್ತದೆ,’’ ಎಂದು ಅವರು ಹೇಳಿದರು.
ಒಂದು ಗಂಟೆಯೊಳಗೆ ಅತ್ಯಾಧುನಿಕ ಚಿಕಿತ್ಸೆ: ಕೇವಲ ಒಂದು ಗಂಟೆಯ ಅವಧಿಯಲ್ಲಿ ಈ ಅತ್ಯಾಧುನಿಕ ಚಿಕಿತ್ಸೆಯನ್ನು ಡಾ. ಯೂಸುಫ್ ಕುಂಬ್ಳೆ ಮತ್ತವರ ವೈದ್ಯರ ತಂಡ ಯಶಸ್ವಿಯಾಗಿ ಮಾಡಿ ಮುಗಿಸಿದೆ. ಇದೊಂದು ಹೊಸ ಸಾಧನೆ ಮಾಡಿದ ಶ್ರೇಯಸ್ಸಿಗೆ ಪಾತ್ರವಾಯಿತು. ಇದು ಇಂಡಿಯಾನ ಆಸ್ಪತ್ರೆಯ ಎರಡನೇ ಸಾಧನೆ . ಈ ಅತ್ಯಾಧುನಿಕ ಚಿಕಿತ್ಸೆಯನ್ನು ಭಾರತದಲ್ಲೇ ಮೊದಲ ಬಾರಿ 2019ರಲ್ಲಿ ಇಂಡಿಯಾನ ಆಸ್ಪತ್ರೆಯಲ್ಲಿ ಮಾಡಲಾಗಿತ್ತು ಎಂಬುದೂ ಇಲ್ಲಿ ಉಲ್ಲೇಖನೀಯ ಎಂದು ಯೂಸುಫ್ ಕುಂಬ್ಳೆ ಮಾಹಿತಿ ನೀಡಿದರು.
ಈ ಅತ್ಯಾದುನಿಕ ಚಿಕಿತ್ಸೆಯಲ್ಲಿ ರೋಗಿಯು 8 ಗಂಟೆಗಳೊಳಗಾಗಿ ಪ್ರಜ್ಞೆಗೆ ಮರುಳುತ್ತಾರೆ ಮತ್ತು 24 ಗಂಟೆಗಳೊಳಗಾಗಿ ಅವರನ್ನು ತುರ್ತು ಚಿಕಿತ್ಸಾ ನಿಗಾ ಘಟಕದಿಂದ (ಐಸಿಯು) ಸಾಮಾನ್ಯ ವಾರ್ಡ್ ಗೆ ಕಳಿಸಲಾಗುತ್ತದೆ. ಆಸ್ಪತ್ರೆಗೆ ದಾಖಲಾದ ಕೇವಲ 5 ದಿನಗಳೊಳಗಾಗಿ ರೋಗಿಯು ಆಸ್ಪತ್ರೆಯಿಂದ ಬಿಡುಗಡೆಗೊಳ್ಳಬಹುದು ಎಂಬುದು ವೈಶಿಷ್ಟ.
ಟ್ರಾನ್ಸ್ ಕ್ಯಾತಿಟರ್ ಪಲ್ಮ್‌ನರಿ ವಾಲ್ವ್ ರಿಪ್ಲೇಸ್‌ಮೆಂಟ್ (ಟಿಎಂವಿಆರ್) ಅನ್ನು ಕ್ಯಾತಿಟರ್ ಮಿಟ್ರಲ್ ವಾಲ್ವ್ ರಿಪ್ಲೇಸ್‌ಮೆಂಟ್ ಸಾಮಾನ್ಯವಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ರೋಗಿಗೆ ಅದರ ಬೈ ಪಾಸ್ ಸರ್ಜರಿ ಇಲ್ಲದೆಯೆ ಹೃದಯದ ಕವಾಟನ್ನು ಬದಲಿಸುವ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪರ್ಯಾಯ ಚಿಕಿತ್ಸೆ ಇದಾಗಿದೆ ಎಂದು ಡಾ.ಯೂಸುಫ್ ಕುಂಬ್ಳೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಇಂಡಿಯಾನ ಆಸ್ಪತ್ರೆಯ ಡಾ.ಅಲಿ ಕುಂಬ್ಳೆ, ತಜ್ಞರಾದ ಡಾ.ಅಪೂರ್ವ ಜಯದೇವ್ ಮತ್ತು ಡಾ.ಸಂಧ್ಯಾರಾಣಿ ಉಪಸ್ಥಿತರಿದ್ದರು.
ಕವಾಟದೊಳಗೆ ಕವಾಟನ್ನು ಅಳವಡಿಸುವ ಹೃದಯ ಚಿಕಿತ್ಸೆಯ ಈ ಕಾರ್ಯವಿಧಾನವು ಬಹಳ ಅಪರೂಪದ್ದಾಗಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಟ್ರಾನ್ಸ್ ಕ್ಯಾತಿಟರ್ ಪಲ್ಮ್‌ನರಿ ವಾಲ್ವ್ ರಿಪ್ಲೇಸ್ ಮೆಂಟ್ ((Transcatheter Pulmonary Valve replacement)) ಎಂದು ಕರೆಯಲಾಗುತ್ತದೆ.
-ಡಾ.ಯೂಸುಫ್ ಎ.ಕುಂಬ್ಳೆ
