ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಅಕ್ಷರಶಃ ಮರಣಶಾಸನ: ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಮಾಡುವುದನ್ನು ವಿರೋಧಿಸಿ ಪ್ರತಿಭಟನೆ

ಬೆಂಗಳೂರು, ಜ.10: ಅವೈಜ್ಞಾನಿಕವಾಗಿ ರೂಪಿಸಿದ ನ್ಯಾ. ಎ.ಜೆ. ಸದಾಶಿವ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನ ಮಾಡಿದರೆ, ಕೆಲವೇ ಸಮುದಾಯಗಳಿಗೆ ಅನುಕೂಲವಾಗಲಿದೆ. ಅತ್ಯಂತ ಹಿಂದುಳಿದ ಜಾತಿಗಳಿಗೆ ಇದು ಅಕ್ಷರಶಃ ಮರಣಶಾಸನವಾಗಲಿದೆ ಎಂದು ಬೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದ ಫ್ರೀಡಂಪಾರ್ಕ್‍ನಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಮಾಡುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸರಕಾರವು ನ್ಯಾ. ಎ.ಜೆ. ಸದಾಶಿವ ಆಯೋಗದ ಶಿಫಾರಸ್ಸುಗಳನ್ನು ಚರ್ಚೆಗೆ ಒಳಪಡಿಸದೆ, ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡಲು ಉಪಸಮಿತಿಯನ್ನು ನೇಮಿಸಿದೆ. ಸಚಿವ ಸಂಪುಟ ಈ ಉಪಸಮಿತಿಯನ್ನು ವಿಸರ್ಜಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರಕಾರವು ವರದಿಯನ್ನು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲೇಬಾರದು. ಒಂದು ಸಮುದಾಯದ ಹಿತಾಸಕ್ತಿಯನ್ನು ಕಡೆಗಣಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೆ ಮುಂದೆ ಆಗುವ ಎಲ್ಲ ಅನಾಹುತಗಳಿಗೂ ರಾಜ್ಯ ಸರಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಸದಾಶಿವ ಆಯೋಗದ ತಂಡ ಯಾವುದೇ ಹಳ್ಳಿಗೆ ಹೋಗಿಲ್ಲ, ತಾಂಡ, ಹಾಡಿಗೆ ಹೋಗಿಲ್ಲ. ಸಮುದಾಯದವರು ಕೂಡ ಆಯೋಗವನ್ನು ಭೇಟಿ ಮಾಡಿಲ್ಲ. ಆದರೆ, ಜಿಲ್ಲಾ ಕೇಂದ್ರಗಳಿಗಷ್ಟೇ ಭೇಟಿ ನೀಡಿ, ಯಾರೋ ಕೊಟ್ಟ ಪತ್ರಗಳನ್ನು ತೆಗೆದುಕೊಂಡು ಆಯೋಗವು ವರದಿಯನ್ನು ಸರಕಾರಕ್ಕೆ ಸಲ್ಲಿಕೆ ಮಾಡಿದೆ ಎಂದು ಅವರು ಹೇಳಿದರು.
ಲಂಬಾಣಿ, ಬೋವಿ, ಕೊರಮ ಮತ್ತು ಕೊರಚ ಸಮುದಾಯದವರು ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದ ನಿಜವಾದ ಅರ್ಹ ಫಲಾನುಭಾವಿಗಳಾಗಿದ್ದಾರೆ. ಉಳಿದವರು ಜೊತೆಯಲ್ಲಿ ಇದ್ದಾರೆ. ಆದರೆ, ನೀವು ಕಳ್ಳದಾರಿಯಲ್ಲಿ ಬಂದು ಪರಿಶಿಷ್ಟ ಜಾತಿಗೆ ಸೇರಿಕೊಂಡಿದ್ದೀರಿ ಎಂದು ಕೆಲವರು ಹೇಳುತ್ತಾರೆ. ನಾವು ಕಳ್ಳ ದಾರಿಯಲ್ಲಿ ಸೇರಿಕೊಂಡಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಾಜ ಮಾರ್ಗದಲ್ಲಿ ಬರೆದು ನಮ್ಮನ್ನು ಸೇರಿಸಿದ್ದಾರೆ ಎಂದರು.
ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ನಿವೃತ್ತ ನ್ಯಾ. ಎ.ಜೆ. ಸದಾಶಿವ ಅವರು ವೈಜ್ಞಾನಿಕವಾಗಿ ಅಧ್ಯಯನ ನಡೆಸದೆ, ಸರಕಾರಕ್ಕೆ ಸದಾಶಿವ ವರದಿ ನೀಡಿದ್ದಾರೆ. ಈ ವರದಿ ಅನುಷ್ಠಾನವಾದರೆ ಪರಿಶಿಷ್ಟ ಜಾತಿಯಲ್ಲಿರುವ ದಮನಿತ ಸಮುದಾಯಕ್ಕೆ ಸಾಕಷ್ಟು ಅನ್ಯಾಯವಾಗುತ್ತದೆ ಎಂದರು.
ಅವೈಜ್ಞಾನಿಕವಾಗಿರುವ ವರದಿಯನ್ನು ರಾಜ್ಯ ಸರಕಾರ ತಕ್ಷಣವೇ ತಿರಸ್ಕರಿಸಬೇಕು. ಅದನ್ನು ಬಿಟ್ಟು, ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬಾರದು. ಸಾರ್ವಜನಿಕವಾಗಿ ಚರ್ಚಿಸದೆ, ಸಮುದಾಯದ ಮುಖಂಡರು, ಧಾರ್ಮಿಕ ಮುಖಂಡರ ಜೊತೆಯೂ ಮಾತುಕತೆ ನಡೆಸದೆ ಆಯೋಗದ ಶಿಫಾರಸ್ಸುಗಳನ್ನು ಹೇಗೆ ಅನುಷ್ಠಾನ ಮಾಡಲು ಸಾಧ್ಯ ಎಂದು ಅವರು ಪ್ರಶ್ನೆ ಮಾಡಿದರು.
ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‍ನಲ್ಲಿ ಬೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆದುಹಾಕಿ ಎಂದು ಅರ್ಜಿ ಸಲ್ಲಿಸಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ. ನಮ್ಮ ಹೋರಾಟ ಈಗ ಪ್ರಾರಂಭವಾಗಿದೆ. ಇಂದು ಕುಳಿತು ಚರ್ಚೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಾವು ವಿಧಾನಸೌಧಕ್ಕೂ ಮುತ್ತಿಗೆ ಹಾಕಲು ಸಿದ್ಧರಿದ್ದೇವೆ.
- ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬೋವಿ ಗುರುಪೀಠ
--------------------------------------
ರ‍್ಯಾಲಿಯಲ್ಲಿ 5 ಲಕ್ಷ ಕಿಂತಲೂ ಹೆಚ್ಚು ಜನರು ಭಾಗಿ
ನ್ಯಾ.ಸದಾಶಿವ ಆಯೋಗ ವರದಿಯ ಶಿಫಾರಸ್ಸುಗಳನ್ನು ಜಾರಿ ಮಾಡಲು ರಾಜ್ಯ ಸರಕಾರವು ನೇಮಿಸಿದ ಉಪಸಮಿತಿಯನ್ನು ವಿಸರ್ಜನೆ ಮಾಡಲು ಒತ್ತಾಯಿಸಿ ರ್ಯಾಲಿ ನಡೆಸಲಾಯಿತು. ನಗರದ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‍ವರೆಗೂ ನಡೆದ ರ್ಯಾಲಿಯಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ರ್ಯಾಲಿ ನಡೆದ ರಸ್ತೆಗಳಲ್ಲಿ ವಾಹನಗಳು ಸಂಚಾರಿಸದಂತೆ ಮುಂಜಾಗೃತವಾಗಿ ಪೋಲಿಸರು ಬ್ಯಾರಿಕೇಡ್‍ಗಳನ್ನು ಹಾಕಿದ್ದರು. ಪರಿಣಾಮವಾಗಿ ಮೆಜೆಸ್ಟಿಕ್ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.






.jpg)
.jpg)

