ಪಾಕ್‌ಗೆ 9 ಶತಕೋಟಿ ಡಾಲರ್ ನೆರವು :ವಿಶ್ವಸಮುದಾಯದ ವಾಗ್ದಾನ

ಜಿನೇವಾ,ಜ.10: ಕಳೆದ ವರ್ಷದ ವಿನಾಶಕಾರಿ ಪ್ರವಾಹದಿಂದ ಚೇತರಿಸಿಕೊಳ್ಳಲು ಪಾಕಿಸ್ತಾನವು ಸೋಮವಾರ ವಿಶ್ವಸಂಸ್ಥೆಯ ಮೂಲಕ ವಿವಿಧ ದೇಶಗಳಿಂದ 9 ಶತಕೋಟಿ ಡಾಲರ್‌ಗೂ ಅಧಿಕ ಆರ್ಥಿಕನೆರವಿನ ವಾಗ್ದಾನವನ್ನು ಪಡೆದುಕೊಂಡಿದೆ. ಹವಾಮಾನ ಬದಲಾವಣೆಯ ವಿರುದ್ಧ ದೇಶಗಳು ಹೇಗೆ ಪ್ರತಿರೋಧವನ್ನು ಪ್ರದರ್ಶಿಸಬಹುದೆಂಬ ಬಗ್ಗೆ ತಾನು ಇಡೀ ಜಗತ್ತಿಗೆ ಮಾದರಿಯಾಗುವುದಾಗಿ ಪಾಕಿಸ್ತಾನವು ಈ ಸಂದರ್ಭದಲ್ಲಿ ಘೋಷಿಸಿದೆ.
ಪಾಕಿಸ್ತಾನಕ್ಕೆ ಪ್ರವಾಹದ ಆಘಾತದಿಂದ ಚೇತರಿಸಿಕೊಳ್ಳಲು ವಿಶ್ವ ಸಮುದಾಯದ ಬೆಂಬಲಕೋರಲು ಜಿನೇವಾದಲ್ಲಿ ವಿಶ್ವಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾವೇಶದ ಸಮಾರೋಪದಲ್ಲಿ ಪಾಕ್ ಈ ಘೋಷಣೆ ಮಾಡಿದೆ. ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಝರ್ದಾರಿ ಮಾತನಾಡಿ ‘‘ಪ್ರಾಯಶಃ ತನ್ನ ಮೂರನೇ ಒಂದು ಭಾಗದಷ್ಟು ಭೂಪ್ರದೇಶವು ನೀರಿನಲ್ಲಿ ಮುಳುಗಡೆಗೊಂಡಂತಹ ಪ್ರವಾಹವನ್ನು ಎದುರಿಸಿದ ಮೊದಲ ದೇಶ ನಮ್ಮದಾಗಿದೆ ಎಂದರು. ಆದರೆ ದುರದೃಷ್ಟವಶಾತ್ ಇದುವೇ ಕೊನೆಯಾಗಿರಲಾರದು’’ ಎಂದವರು ಆತಂಕ ವ್ಯಕ್ತಪಡಿಸಿದರು.
ಸಮಾವೇಶವು ಅಭೂತಪೂರ್ವ ಯಶಸ್ಸನ್ನು ಕಂಡಿದೆಯೆಂದು ಸಂತಸ ವ್ಯಕ್ತಪಡಿಸಿದ ಅವರು, ದೇಶಕ್ಕೆ ಬಯಸಿದ್ದಕ್ಕಿಂತ ಹೆಚ್ಚು ನೆರವಿನ ವಾಗ್ದಾನ ದೊರೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಇಂತಹ ಸಂಕಷ್ಟವನ್ನು ಎದುರಿಸುವ ರಾಷ್ಟ್ರಗಳ ನೆರವಿಗೆ ಧಾವಿಸಲು ಈ ಸಮಾವೇಶವು ಒಂದು ಮಾರ್ಗದರ್ಶಿಯಾಗಲಿದೆಯೆಂದೂ ಅವರು ಹೇಳಿದರು.
ಮುಂಗಾರಿನ ಪ್ರವಾಹದಿಂದ ಪಾಕ್ ಚೇತರಿಸಿಕೊಳ್ಳುವುದಕ್ಕೆ ನೆರವಾಗಲು ಆ ದೇಶದಲ್ಲಿ ಆಗಾಧವಾದ ಹೂಡಿಕೆಗಳನ್ನು ಮಾಡುವಂತೆಯೂ ವಿಶ್ವಸಂಸ್ಥೆಯ ವರಿಷ್ಠ ಆ್ಯಂಟೊನಿಯ ಗುಟೆರಸ್ ಅವರು ಈ ಸಂದರ್ಭದಲ್ಲಿ ವಿಶ್ವಸಮುದಾಯಕ್ಕೆ ಕರೆ ನೀಡಿದರು.
ಹವಾಮಾನದ ಬಿಕ್ಕಟ್ಟಿನ ಮುಂಚೂಣಿಯಲ್ಲಿರುವ ರಾಷ್ಟ್ರಗಳಿಗೆ ಬೃಹತ್ ಆರ್ಥಿಕ ಬೆಂಬಲದ ಅಗತ್ಯವಿದೆಯೆಂದು ಗುಟೆರಸ್ ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.
ಪ್ರವಾಹದಿಂದ ಜರ್ಝರಿತಗೊಂಡಿರುವ ದೇಶವನ್ನು ಪುನರ್‌ನಿರ್ಮಿಸಲು ಹಾಗೂ ಭವಿಷ್ಯದಲ್ಲಿ ಹವಾಮಾನ ಬದಲಾವಣೆಯ ಅಘಾತವನ್ನು ಎದುರಿಸುವ ತನ್ನ ಸಾಮರ್ಥವನ್ನು ಸುಧಾರಿಸಲು ತನಗೆ ಮುಂದಿನ ಮೂರು ವರ್ಷಗಳಲ್ಲಿ 16.3 ಶತಕೋಟಿ ಡಾಲರ್ ನೆರವಿನ ಅಗತ್ಯವಿದೆಯೆಂದು ಪಾಕ್ ತಿಳಿಸಿತ್ತು.
ಈ ವೆಚ್ಚದ ಅರ್ಧದಷ್ಟು ಹಣವನ್ನು ತಾನು ಭರಿಸಬಲ್ಲ ಹಾಗೂ ಉಳಿದುದನ್ನು ಅಂತಾರಾಷ್ಟ್ರೀಯ ಸಮುದಾಯವು ಭರಿಸಬೇಕೆಂದು ಅದು ಆಗ್ರಹಿಸಿತ್ತು.
ಫ್ರಾನ್ಸ್‌ನಿಂದ 384 ದಶಲಕ್ಷ ಡಾಲರ್ ಹಾಗೂ ಅಮೆರಿಕ ಮತ್ತು ಚೀನಾದದಿಂದ ಹೆಚ್ಚುವರಿಯಾಗಿ 100 ದಶಲಕ್ಷ ಡಾಲರ್‌ಸೇರಿದಂತೆ ಅಂತಿಮವಾಗಿ ಅಂತಾರಾಷ್ಟ್ರೀಯ ಸಮುದಾಯದಿಂದ ಪಾಕಿಸ್ತಾನಕ್ಕೆ 9 ಶತಕೋಟಿಗೂ ಅಧಿಕ ಆರ್ಥಿಕ ನೆರವು ಲಭಿಸಿದೆಯೆಂದು ಮೂಲಗಳು ತಿಳಿಸಿವೆ.
ಇದರ ಜೊತೆಗೆ ವಿಶ್ವಬ್ಯಾಂಕ್ ಹಾಗೂ ಇತರ ಹಲವಾರು ಅಂತಾರಾಷ್ಟ್ರೀಯ ಪ್ರಾದೇಶಿಕ ಅಭಿವೃದ್ಧಿ ಬ್ಯಾಂಕ್‌ಗಳು ಕೂಡಾ ಸಾಲದ ರೂಪದಲ್ಲಿ ನೆರವಾಗಲು ಬಂದಿರುವದಾಗಿ ಪಾಕ್ ತಿಳಿಸಿದೆ.