ಜೋಶಿಮಠ ಭೂಕುಸಿತ: ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಹೊಸದಿಲ್ಲಿ, ಜ.10: ಉತ್ತರಾಖಂಡದ ಜೋಶಿಮಠದಲ್ಲಿ ಸಂಭವಿಸುತ್ತಿರುವ ಭೂಕುಸಿತಗಳಿಗೆ ಸಂಬಂಧಿಸಿದಂತೆ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ನಿರಾಕರಿಸಿತು. ಇಂತಹ ಘಟನೆಗಳನ್ನು ನೋಡಿಕೊಳ್ಳಲು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸಂಸ್ಥೆಗಳಿವೆ ಮತ್ತು ಪ್ರತಿಯೊಂದನ್ನೂ ನ್ಯಾಯಾಲಯಕ್ಕೆ ತರುವ ಅಗತ್ಯವಿಲ್ಲ ಎಂದು ಅರ್ಜಿದಾರರಿಗೆ ತಿಳಿಸಿದ ಸರ್ವೋಚ್ಚ ನ್ಯಾಯಾಲಯವು,ಜ.16ಕ್ಕೆ ವಿಚಾರಣೆಯನ್ನು ನಿಗದಿಗೊಳಿಸಿತು.
‘ದೇಶದಲ್ಲಿ ಮುಖ್ಯವಾಗಿರುವ ಎಲ್ಲವೂ ನಮ್ಮ ಬಳಿಗೆ ಬರಬೇಕಿಲ್ಲ ಅಲ್ಲವೇ? ತಮ್ಮ ನಿಯಂತ್ರಣದಲ್ಲಿರುವ ವಿಷಯಗಳನ್ನು ನೋಡಿಕೊಳ್ಳಲು ಚುನಾಯಿತ ಸಂಸ್ಥೆಗಳಿವೆ ’ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಬುಧವಾರವೇ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿದ ವಕೀಲರಿಗೆ ತಿಳಿಸಿದರು.
ವಿಷಯವು ಮುಖ್ಯವಾಗಿದೆ ಮತ್ತು ಜನರು ರಸ್ತೆಗೆ ಬಿದ್ದಿದ್ದಾರೆ ಎಂದು ವಕೀಲರು ನ್ಯಾ.ಪಿ.ಎಸ್.ನರಸಿಂಹ ಅವರನ್ನೂ ಒಳಗೊಂಡಿದ್ದ ಪೀಠಕ್ಕೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ನರಸಿಂಹ,ಅವುಗಳನ್ನು ಚುನಾಯಿತ ಸಂಸ್ಥೆಗಳು ನೋಡಿಕೊಳ್ಳುತ್ತಿವೆ ಎಂದರು.
ಜೋಶಿಮಠದಲ್ಲಿಯ ಸ್ಥಿತಿಯನ್ನು ರಾಷ್ಟ್ರೀಯ ವಿಪತ್ತನ್ನಾಗಿ ಘೋಷಿಸಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಿರುವ ಅವಿಮುಕ್ತೇಶ್ವರಾನಂದ ಸರಸ್ವತಿಯವರು,ಅಲ್ಲಿಯ ನಿವಾಸಿಗಳಿಗೆ ನೆರವಾಗುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ನಿರ್ದೇಶನವನ್ನು ಕೋರಿದ್ದಾರೆ.







