ಮಲೇಶ್ಯಕ್ಕೆ ವಲಸೆಗೆ ಯತ್ನಿಸಿದ 112 ರೋಹಿಂಗ್ಯಗಳಿಗೆ ಜೈಲು ಶಿಕ್ಷೆ

ಯಾಂಗೊನ್,ಜ.10: ಮಲೇಶ್ಯಕ್ಕೆ ಕಾನೂನುಬದ್ಧವಾದ ದಾಖಲೆಪತ್ರಗಳಿಲ್ಲದೆ ಪ್ರಯಾಣಿಸಲು ಯತ್ನಿಸಿದ ಆರೋಪದಲ್ಲಿ ಮ್ಯಾನ್ಮಾರ್ ನ್ಯಾಯಾಲಯವು 12 ಮಂದಿ ಮಕ್ಕಳು ಸೇರಿದಂತೆ 112 ರೋಹಿಂಗ್ಯಗಳಿಗೆ ಎರಡರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಿದೆ.
ಮಲೇಶ್ಯಕ್ಕೆ ತೆರಳಲು ಯತ್ನಿಸುತ್ತಿದ್ದ ರೋಹಿಂಗ್ಯಗಳ ಈ ತಂಡವನ್ನು ದಕ್ಷಿಣ ಮ್ಯಾನ್ಮಾರ್‌ನ ಪ್ರಾಂತದಲ್ಲಿ ಕಳೆದ ತಿಂಗಳು ಬಧಿಸಲಾಗಿದ್ದು, ಜನವರಿ 6ರಂದು ಶಿಕ್ಷೆಯನ್ನು ಪ್ರಕಟಿಸಲಾಗಿದೆಯೆಂದು ‘ ಗ್ಲೋಬಲ್ ನ್ಯೂ ಲೈಟ್ ಮ್ಯಾನ್ಮಾರ್’ ಸುದ್ದಿಸಂಸ್ಥೆಯ ಸ್ಥಳೀಯ ಪೊಲೀಸರು ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ತಂಡದಲ್ಲಿ 12 ಮಂದಿ ಮಕ್ಕಳನ್ನು ಯಾಂಗೊನ್‌ನಲ್ಲಿರುವ ‘ಯುವಜನ ತರಬೇತಿ ಶಾಲೆ’ಗೆ ಕಳುಹಿಸಲಾಗಿದೆಯೆಂದು ವರದಿ ತಿಳಿಸಿದೆ.
ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್‌ನ ಶಿಬಿರಗಳಲ್ಲಿ ನೆಲೆಸಿರುವ ಸಾವಿರಾರು ರೋಹಿಂಗ್ಯಗಳು ಮುಸ್ಲಿಂ ಬಾಹುಳ್ಯದ ರಾಷ್ಟ್ರಗಳಾದ ಮಲೇಶ್ಯ ಹಾಗೂ ಇಂಡೊನೇಶ್ಯಗಳಿಗೆ ತೆರಳಲು,ಅತ್ಯಂತ ಅಪಾಯಕಾರಿಯಾದ ಸಮುದ್ರ ಮಾರ್ಗಗಳಲ್ಲಿ ಪ್ರಯಾಣಿಸುತ್ತಿದ್ದಾರೆ.
ರವಿವಾರದಂದು 200 ಮಂದಿ ರೋಹಿಂಗ್ಯ ನಿರಾಶ್ರಿತರಿಂದ್ದ ಮರದ ದೋಣಿಯೊಂದು ಇಂಡೊನೇಶ್ಯದ ಪಶ್ಚಿಮಕರಾವಳಿಯ ತೀರವನ್ನು ತಲುಪಿದೆ. ಇದರೊಂದಿಗೆ ನವೆಂಬರ್ ತಿಂಗಳಿನಿಂದೀಚೆಗೆ ಇಂಡೊನೇಶ್ಯಕ್ಕೆ ರೋಹಿಂಗ್ಯ ನಿರಾಶ್ರಿತರ ತಂಡ ಆಗಮಿಸಿರುವುದು ಇದು ಐದನೆ ಸಲವಾಗಿದೆ.