ನಾಸಾ ಉಪಗ್ರಹ ಸುರಕ್ಷಿತ ಪತನ : ಆಲಾಸ್ಕ ಸಮೀಪದ ಸಾಗರದಲ್ಲಿ ಬಿದ್ದ ಉಪಗ್ರಹ
40 ವರ್ಷಗಳ ಕಾಲ ಭೂಮಿಯನ್ನು ಪರಿಭ್ರಮಿಸಿದ ದಾಖಲೆ

ಕೇಪ್‌ಕ್ಯಾನೆವರಲ್,ಜ.10: ಸುಮಾರು 40 ವರ್ಷಗಳ ಕಾಲ ಭೂಮಿಯ ಕಕ್ಷೆಯನ್ನು ಪರಿಭ್ರಮಿಸಿದ್ದ ಉಪಗ್ರಹವೊಂದು ಸೋಮವಾರ ಅಲಾಸ್ಕ ಕರಾವಳಿಯ ಸಮೀಪದ ಸಾಗರ ಪ್ರದೇಶದಲ್ಲಿ ಯಾವುದೇ ಅಪಾಯವುಂಟು ಮಾಡದೆ ಪತನಗೊಂಡಿದೆ. ಎಂದು ವರದಿಯಾಗಿದೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನಿರ್ಮಿತ ಈ ಉಪಗ್ರಹವನ್ನು 1984ರಲ್ಲಿ ಅಂತರಿಕ್ಷದಲ್ಲಿ ಸ್ಥಾಪಿಸಲಾಗಿತ್ತು. ರವಿವಾರ ರಾತ್ರಿ ಉಪಗ್ರಹವು ಅಲಾಸ್ಕಾ ಪ್ರದೇಶದಿಂದ ಕೆಲವೇ ನೂರು ಮೈಲು ದೂರದಲ್ಲಿರುವ ಬೆರಿಂಗ್ ಸಮುದ್ರದಲ್ಲಿ ಪತನಗೊಂಡಿದೆ. ಪತನಗೊಂಡ ಉಪಗ್ರಹದ ಅವಶೇಷಗಳಿಂದ ಯಾವುದೇ ಹಾನಿಯಾಗಿಲ್ಲವೆಂದು ನಾಸಾ ತಿಳಿಸಿದೆ.
2450 ಕೆ.ಜಿ.ತೂಕದ ಈ ಉಪಗ್ರಹವನ್ನು ಭೂ ವಿಕಿರಣ ಅಧ್ಯಯಕ್ಕಾಗಿ ಉಡಾವಣೆಗೊಳಿಸಲಾಗಿತ್ತು. ಆದರೆ ಪತನಗೊಳ್ಳುವ ವೇಳೆ ಅದು ಭೂವಾತಾವರಣವನ್ನು ಪ್ರವೇಶಿಸುವಾಗ ಸಂಪೂರ್ಣವಾಗಿ ಉರಿದು ಬೂದಿಯಾಗಲಿದೆಯಾದರೂ ಕೆಲವು ಅವಶೇಷಗಳು ಉಳಿಯುವ ಸಾಧ್ಯತೆಯಿದೆಯೆಂದು ನಾಸಾ ಹೇಳಿತ್ತು. ಆದರೆ ಈ ಉಪಗ್ರಹದ ಅವಶೇಷಗಳ ಪತನದ ವೇಳೆ ಹಾನಿಯಾಗುವ ಸಾಧ್ಯತೆಯ ಪ್ರಮಾಣ 9400ಕ್ಕೆ 1ರಷ್ಟಿರುತ್ತದೆ ಎಂಬುದಾಗಿ ಅದು ತಿಳಿಸಿತ್ತು.
ಅಮೆರಿಕದ ಬಾಹ್ಯಾಕಾಶ ನೌಕೆ ಸ್ಪೇಶ್‌ಶಟಲ್ ಚ್ಯಾಲೆಂಜರ್ 1984ರಲ್ಲಿ ಈ ಉಪಗ್ರಹವನ್ನು ಭೂಕಕ್ಷೆಗೆ ಒಯ್ದಿತ್ತು. ಬಾಹ್ಯಾಕಾಶ ನೌಕೆಯಲ್ಲಿದ್ದ ಅಮೆರಿಕದ ಮಹಿಳಾಗಗನಯಾತ್ರಿ ಸ್ಯಾಲಿ ರೈಡ್ ಈ ಉಪಗ್ರಹವನ್ನು ಕಕ್ಷೆಗೆ ಬಿಡುಗಡೆಗೊಳಿಸಿದ್ದರು.
ಈ ಉಪಗ್ರಹ ವಾತಾವರಣದಲ್ಲಿ ಓರೆನ್ ವಲಯದ ಅಧ್ಯಯನ ನಡೆಸಿತ್ತು ಹಾಗೂ ಸೂರ್ಯನಿಂದ ಬಿಡುಗಡೆಯಾಗುವ ವಿಕಿರಣ ಇಂಧನವನ್ನು ಭೂಮಿಯು ಹೇಗೆ ಹೀರಿಕೊಳ್ಳುತ್ತದೆಯೆಂಬ ಬಗ್ಗೆ ಅದು ದತ್ತಾಂಶಗಳನ್ನು ಸಂಗ್ರಹಿಸಿತ್ತು.







