ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಗೆ ನೀಡಿದ್ದ ಊಟದಲ್ಲಿ ಕಲ್ಲು!

ಹೊಸದಿಲ್ಲಿ, ಜ.10: ಮೂತ್ರವಿಸರ್ಜನೆ ಹಗರಣದಿಂದಾಗಿ ಈಗಾಗಲೇ ಟೀಕೆಗಳು ಮತ್ತು ಪರಿಶೀಲನೆಗೆ ಗುರಿಯಾಗಿರುವ ಏರ್ ಇಂಡಿಯಾ ಇನ್ನೊಂದು ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದೆ. ಏರ್ ಇಂಡಿಯಾ ವಿಮಾನದಲ್ಲಿ ತನಗೆ ನೀಡಲಾಗಿದ್ದ ಊಟದಲ್ಲಿ ಕಲ್ಲು ಇತ್ತು ಎಂದು ಬಿಬಿಸಿಯ ಪತ್ರಕರ್ತೆ ಸರ್ವಪ್ರಿಯಾ ಸಾಂಗ್ವಾನ್ ಎಂಬ ಟ್ವಿಟರ್‌ನಲ್ಲಿ ದೂರಿಕೊಂಡಿದ್ದಾರೆ. ಊಟದಲ್ಲಿ ತನಗೆ ಸಿಕ್ಕಿದ ಕಲ್ಲಿನ ಎರಡು ಚಿತ್ರಗಳನ್ನೂ ಅವರು ಶೇರ್ ಮಾಡಿಕೊಂಡಿದ್ದಾರೆ.
‘ಏರ್ ಇಂಡಿಯಾ,ಕಲ್ಲು ಮುಕ್ತ ಆಹಾರವನ್ನು ಖಚಿತಪಡಿಸಿಕೊಳ್ಳಲು ನಿಮಗೆ ಸಂಪನ್ಮೂಲಗಳು ಮತ್ತು ಹಣದ ಅಗತ್ಯವಿಲ್ಲ. ಇದು ಎಐ 215 ಯಾನದಲ್ಲಿ ನೀಡಲಾಗಿದ್ದ ಊಟದಲ್ಲಿ ನನಗೆ ದೊರೆತ ಕಲ್ಲು. ಸಿಬ್ಬಂದಿ ಜೇಡಾನ್ ಅವರಿಗೆ ಈ ಮಾಹಿತಿಯನ್ನು ನೀಡಿದ್ದೇನೆ. ಇಂತಹ ನಿರ್ಲಕ್ಷವು ಸ್ವೀಕಾರಾರ್ಹವಲ್ಲ’ ಎಂದು ಟ್ವೀಟಿಸಿರುವ ಸಾಂಗ್ವಾನ್, ಅದನ್ನು ಏರ್ ಇಂಡಿಯಾಕ್ಕೆ ಟ್ಯಾಗ್ ಮಾಡಿದ್ದಾರೆ.
ಸಾಂಗ್ವಾನ್‌ರ ಟ್ವೀಟ್ ಟ್ವಿಟರ್ ಬಳಕೆದಾರರಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟು ಹಾಕಿದೆ. ವಿಶೇಷವಾಗಿ ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾದ ಸೇವೆಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಿರುವ ಈ ಸಮಯದಲ್ಲಿ ನೆಟ್ಟಿಗರು ಅದರ ವಿರುದ್ಧ ಟೀಕೆಗಳ ಮಹಾಪೂರವನ್ನೇ ಹರಿಸಿದ್ದಾರೆ.
‘ಜೆಆರ್‌ಡಿ ಟಾಟಾ ಅವರು ವೈಮಾನಿಕ ಉದ್ಯಮ ಹೇಗಿರಬೇಕು ಎನ್ನುವುದಕ್ಕೆ ದೃಷ್ಟಾಂತವಾಗಿದ್ದರು. ಅವರು ಸರಕಾರವು ಏರ್ ಇಂಡಿಯಾವನ್ನು ಸ್ವಾಧೀನ ಪಡಿಸಿಕೊಳ್ಳುವ ಮುನ್ನ ಅದನ್ನು ಜಾಗತಿಕವಾಗಿ ಗೌರವ ಹೊಂದಿದ್ದ ಬ್ರಾಂಡ್ ಆಗಿ ಕಟ್ಟಿದ್ದರು.
ಈಗ ನೀವು ಅದರ ಒಡೆಯರಾಗಿ ಮರಳಿ ಬಂದಿದ್ದೀರಿ ಮತ್ತು ಸೇವೆಗಳಲ್ಲಿ ಹೊಸ ಕಳಪೆತನಗಳನ್ನು ಸಾಧಿಸುತ್ತಿದ್ದೀರಿ? ಕಾರ್ಪೊರೇಟ್ ಮೇಲ್ವಿಚಾರಣೆ ಇಲ್ಲವೇ? ಪೀ ಗೇಟ್ (ಮೂತ್ರ ವಿಸರ್ಜನೆ ಹಗರಣ) ಮತ್ತು ಈಗ ಇದನ್ನು ಹೇಗೆ ನೀವು ನಿಭಾಯಿಸುತ್ತೀರಿ? ’ಎಂದು ಟ್ವಿಟರ್ ಬಳಕೆದಾರರೋರ್ವರು ಟಾಟಾ ಗ್ರೂಪ್‌ನ್ನು ಉದ್ದೇಶಿಸಿ ಟ್ವೀಟಿಸಿದ್ದಾರೆ.
‘ದೇವರು ದೊಡ್ಡವನು,ನಿಮ್ಮ ಹಲ್ಲು ಕೂಡ ಮುರಿಯಬಹುದಿತ್ತು, ಏರ್ ಇಂಡಿಯಾ ಇತ್ತೀಚಿಗೆ ಅತ್ಯಂತ ಕೆಟ್ಟದಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಓರ್ವರು ಟ್ವೀಟಿಸಿದ್ದರೆ,‘ಏರ್ ಇಂಡಿಯಾ ಅತ್ಯುತ್ತಮ ವಿಮಾನ ಯಾನ ಸಂಸ್ಥೆಯೊಂದಿಗೆ ಸ್ಪರ್ಧಿಸುತ್ತದೆ ಎಂದು ಭಾವಿಸಿದ್ದೆವು,ಆದರೆ ಅದೀಗ ಭಾರತೀಯ ರೈಲ್ವೆಯೊಂದಿಗೆ ಪೈಪೋಟಿಗೆ ಬಿದ್ದಿರುವಂತೆ ಕಾಣುತ್ತಿದೆ ’ಎಂದು ಇನ್ನೋರ್ವರು ಕುಟುಕಿದ್ದಾರೆ.
ಸಾಂಗ್ವಾನ್‌ರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, ‘ಮೇಡಂ,ಇದು ಕಳವಳಕಾರಿಯಾಗಿದೆ ಮತ್ತು ನಾವು ಈ ವಿಷಯವನ್ನು ತಕ್ಷಣ ನಮ್ಮ ಕೇಟರಿಂಗ್ ತಂಡದೊಂದಿಗೆ ಕೈಗೆತ್ತಿಕೊಂಡಿದ್ದೇವೆ. ನಿಮಗೆ ಮರುಮಾಹಿತಿ ನೀಡಲು ನಮಗೆ ಸ್ವಲ್ಪ ಸಮಯ ಕೊಡಿ. ಇದನ್ನು ನಮ್ಮ ಗಮನಕ್ಕೆ ತಂದಿದ್ದಕ್ಕಾಗಿ ಧನ್ಯವಾದಗಳು’ ಎಂದು ಟ್ವೀಟಿಸಿದೆ.
You don’t need resources and money to ensure stone-free food Air India (@airindiain). This is what I received in my food served in the flight AI 215 today. Crew member Ms. Jadon was informed.
— Sarvapriya Sangwan (@DrSarvapriya) January 8, 2023
This kind of negligence is unacceptable. #airIndia pic.twitter.com/L3lGxgrVbz







