ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೈಕೊರೆಯುವ ಚಳಿ, ಬೀದರ್ ನಲ್ಲಿ 5.5 ಡಿಗ್ರಿ ಕನಿಷ್ಠ ತಾಪಮಾನ ದಾಖಲು

ಬೆಂಗಳೂರು, ಜ.10: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ತಾಪಮಾನ ಕುಸಿಯುತ್ತಿರುವುದರಿಂದ ಮಕರ ಸಂಕ್ರಾಂತಿ ಹಬ್ಬದವರೆಗೂ ಚಳಿಯ ತೀವ್ರತೆ ಹೆಚ್ಚಾಗಿರಲಿದೆ.
ಹಗಲಿನಲ್ಲಿ ಸಾಕಷ್ಟು ಬಿಸಿಲು ಇದ್ದರೂ ಆಗಾಗ ತಂಪಾದ ಮೇಲ್ಮೈ ಗಾಳಿ ಬೀಸುತ್ತಿದ್ದು, ಸಂಜೆ ಹಾಗೂ ರಾತ್ರಿ ಸಮಯದಲ್ಲಿ ಚಳಿ ಹೆಚ್ಚಾಗಲಿದೆ. ಮುಂಜಾನೆ ಬಹಳಷ್ಟು ಕಡೆಗಳಲ್ಲಿ ಮಂಜು ಕವಿದ ವಾತಾವರಣ ಸಹಜವಾಗಿದೆ. ಕೆಲವೆಡೆ ದಟ್ಟ ಮಂಜು ಕವಿಯಲಿದೆ. ಹಲವು ಕಡೆಗಳಲ್ಲಿ ಭಾಗಶಃ ಮೋಡ ಕವಿಯಲಿದೆ. ಹೀಗಾಗಿ ರಾಜ್ಯದಲ್ಲಿ ಕನಿಷ್ಠ ತಾಪಮಾನ ಸರಾಸರಿ 12ರಿಂದ 16ಡಿಗ್ರಿ ಸೆಲ್ಸಿಯಸ್‌ವರೆಗೂ ದಾಖಲಾಗುತ್ತಿದೆ. ಗರಿಷ್ಠ ತಾಪಮಾನವು 26ರಿಂದ 29 ಡಿಗ್ರಿ ಸೆಲ್ಸಿಯಸ್‌ವರೆಗೂ ದಾಖಲಾಗುತ್ತಿದೆ.
ರಾಜ್ಯದಲ್ಲಿ ಈ ಬಾರಿಯ ಮುಂಗಾರು ಹಾಗೂ ಹಿಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿದ್ದು, ವಾತಾವರಣದಲ್ಲಿ ತೇವಾಂಶವೂ ಆಧಿಕವಾಗಿದೆ. ಬಹಳಷ್ಟು ಕಡೆ ಬೆಳಗಿನ ಜಾವ ಸಾಕಷ್ಟು ಇಬ್ಬನಿಯೂ ಬೀಳುತ್ತಿದೆ.
ಕಳೆದ ಬಾರಿಯಂತೆ ಈ ಬಾರಿಯೂ ಡಿಸೆಂಬರ್‌ವರೆಗೂ ಮಳೆ ಮುಂದುವರಿದಿದೆ. ಇದರಿಂದಾಗಿ ಜನವರಿಯಲ್ಲಿ ಚಳಿಯ ಪ್ರಮಾಣ ಹೆಚ್ಚಾಗಲಿದೆ. ಮಕರ ಸಂಕ್ರಾಂತಿ ಹಬ್ಬದ ನಂತರ ಚಳಿಯ ಪ್ರಮಾಣ ಇಳಿಕೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಚಳಿಗಾಲ ನವೆಂಬರ್‌ನಿಂದ ಪ್ರಾರಂಭವಾಗಿ ಫೆಬ್ರವರಿಯ ವೇಳೆಗೆ ಮುಕ್ತಾಯವಾದರೂ, ಚಂಡ ಮಾರುತ, ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿಗಳಿಂದಾಗಿ ಹಿಂಗಾರು ಮಳೆ ಡಿಸೆಂಬರ್‌ವರೆಗೂ ಮುಂದುವರಿದಿತ್ತು. ಅಲ್ಲದೆ, ಪದೇ ಪದೇ ನಿರಂತರ ಜಿಟಿ ಜಿಟಿ ಮಳೆಯಾಗುತ್ತಿತ್ತು. ಆ ಸಂದರ್ಭದಲ್ಲಿ ಮೈಕೊರೆಯುವ ಚಳಿಯ ತೀವ್ರತೆಯ ಅನುಭವ ಉಂಟಾಗಿತ್ತು.
ಸ್ವೆಟರ್, ರಗ್ಗಿನ ಮೊರೆ ಹೋದ ಜನರು: ಮಂಗಳವಾರ ಬೀದರ್‌ನಲ್ಲಿ ತಾಪಮಾನ ರಾಜ್ಯದಲ್ಲಿಯೇ ಅತಿ ಕನಿಷ್ಠ, 5.5 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ. ಉತ್ತರ ಒಳನಾಡು ಭಾಗದಲ್ಲಿ ವಿಪರೀತ ಚಳಿ ಮುಂದುವರಿದಿದೆ. ಇದರಿಂದ, ರಕ್ಷಣೆ ಪಡೆಯಲು ಜನರು ಸ್ವೆಟರ್, ರಗ್ಗಿನ ಮೊರೆ ಹೋಗಿದ್ದಾರೆ.
ಬೀದರ್‌ನಲ್ಲಿ 5.5 ಡಿಗ್ರಿ, ಬಾಗಲಕೋಟೆಯಲ್ಲಿ 6, ವಿಜಯಪುರದಲ್ಲಿ 6.5, ಬಳ್ಳಾರಿಯಲ್ಲಿ 7.2, ಧಾರವಾಡದಲ್ಲಿ 9.8, ಬೆಳಗಾವಿಯಲ್ಲಿ 10, ಕಲಬುರಗಿಯಲ್ಲಿ 11.4 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ. ಹೀಗಾಗಿ, ಬಿಸಿಲು ನಾಡು, ಬರಪೀಡಿತ ಜಿಲ್ಲೆಗಳು ಚಳಿಯಿಂದ ತರಗುಟ್ಟುತ್ತಿವೆ. ಮೋಡ, ಮಂಜು ಇಲ್ಲ. ಹೀಗಾಗಿ, ಭೂಮಿಯಿಂದ ತಂಪು ಆವಿಯಾಗಿ ಹೊರ ಹೋಗಿದೆ. ಇದು ವಿಪರೀತ ಚಳಿಯನ್ನು ಉಂಟು ಮಾಡಿದೆ ಎನ್ನುತ್ತಾರೆ ಹವಾಮಾನ ತಜ್ಞರು.
ಬೆಲೆಯಲ್ಲಿ ಹೆಚ್ಚಳ: ಗ್ರಾಮೀಣ ಪ್ರದೇಶದ ಜನರು ತಮ್ಮ ಮನೆ ಹಾಗೂ ಬಯಲು ಜಾಗದಲ್ಲಿ ಬೆಂಕಿ ಹಾಕಿಕೊಂಡು ಕಾಯಿಸುವ ದೃಶ್ಯ ಸಾಮಾನ್ಯವಾಗಿದೆ. ನಗರ ಪ್ರದೇಶಗಳಲ್ಲಿ ಜನ ಸ್ವೆಟರ್, ರಗ್ಗು ಹೊದ್ದುಕೊಂಡು, ರಾತ್ರಿ ಹೊತ್ತಿನಲ್ಲಿ ಮನೆಯ ಕಿಟಕಿ, ಬಾಗಿಲು ಭದ್ರಪಡಿಸಿಕೊಂಡು ಚಳಿಯಿಂದ ರಕ್ಷಣೆ ಪಡೆಯುತ್ತಿದ್ದಾರೆ. ಕಳೆದ 15 ದಿನಗಳ ಅವಧಿಯಲ್ಲಿ 400 ರೂ. ಇದ್ದ ಸ್ವೆಟರ್‌ವೊಂದರ ಬೆಲೆ ಕೆಲವೆಡೆ
800 ರೂ.ವರೆಗೆ ಏರಿಕೆಯಾಗಿದೆ. ರಗ್ಗೊಂದರ ಬೆಲೆ 600 ರೂ.ಗಳಿಂದ 1,200 ರೂ.ಗಳವರೆಗೆ ಏರಿಕೆಯಾಗಿದೆ.







