ರೈತರ ಹತ್ಯೆಯ ವಿಚಾರಣೆಗೆ 5 ವರ್ಷ ಬೇಕಾಗಬಹುದು: ಸುಪ್ರೀಂ ಕೋರ್ಟ್ಗೆ ತಿಳಿಸಿದ ಉತ್ತರಪ್ರದೇಶ ಸರಕಾರ
![ರೈತರ ಹತ್ಯೆಯ ವಿಚಾರಣೆಗೆ 5 ವರ್ಷ ಬೇಕಾಗಬಹುದು: ಸುಪ್ರೀಂ ಕೋರ್ಟ್ಗೆ ತಿಳಿಸಿದ ಉತ್ತರಪ್ರದೇಶ ಸರಕಾರ ರೈತರ ಹತ್ಯೆಯ ವಿಚಾರಣೆಗೆ 5 ವರ್ಷ ಬೇಕಾಗಬಹುದು: ಸುಪ್ರೀಂ ಕೋರ್ಟ್ಗೆ ತಿಳಿಸಿದ ಉತ್ತರಪ್ರದೇಶ ಸರಕಾರ](https://www.varthabharati.in/sites/default/files/images/articles/2023/01/11/363387-1673424326.jpg)
ಹೊಸದಿಲ್ಲಿ: ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶೀಶ್ ಪ್ರಮುಖ ಆರೋಪಿಯಾಗಿರುವ ಲಖಿಂಪುರ ಖೇರಿ ಹಿಂಸಾಚಾರದ ವಿಚಾರಣೆ ಪೂರ್ಣಗೊಳ್ಳಲು ಸುಮಾರು ಐದು ವರ್ಷಗಳು ಬೇಕಾಗಬಹುದು ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಬುಧವಾರ ಸುಪ್ರೀಂ ಕೋರ್ಟ್ಗೆ ಉತ್ತರ ಪ್ರದೇಶ ಸರಕಾರ ಸಲ್ಲಿಸಿದ ಸ್ಥಿತಿಗತಿ ವರದಿಯಲ್ಲಿ ತಿಳಿಸಿದ್ದಾರೆ ಎಂದು NDTV ವರದಿ ಮಾಡಿದೆ.
2021ರ ಅಕ್ಟೋಬರ್ 3ರಂದು ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾಯ್ದೆ ಹಾಗೂ ಉತ್ತರಪ್ರದೇಶದ ಉಪ ಮುಖ್ಯಮಂತ್ರಿಯಾಗಿದ್ದ ಕೇಶವ ಪ್ರಸಾದ್ ಮೌರ್ಯ ತಮ್ಮ ಪ್ರದೇಶಕ್ಕೆ ಭೇಟಿ ನೀಡುವುದನ್ನು ವಿರೋಧಿಸಿ ರೈತರು ಲಖಿಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಪ್ರತಿಭಟನಾಕಾರರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿತ್ತು. ಬಳಿಕ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸಹಿತ 8 ಮಂದಿ ಮೃತಪಟ್ಟಿದ್ದರು. ಆಶೀಶ್ ಮಿಶ್ರಾ ಕುಳಿತ್ತಿದ್ದ ಕಾರಿನಡಿ ಬಿದ್ದು ನಾಲ್ವರು ರೈತರು ಮೃತಪಟ್ಟಿದ್ದರು.
ಉದ್ರಿಕ್ತ ರೈತರು ಕಾರಿನ ಚಾಲಕ ಹಾಗೂ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಹೊಡೆದು ಸಾಯಿಸಿದ್ದರು. ಹಿಂಸಾಚಾರದಲ್ಲಿ ಪತ್ರಕರ್ತನೊಬ್ಬ ಪ್ರಾಣ ಕಳೆದುಕೊಂಡಿದ್ದರು.