ಬಾಂಬೆ ಹೈಕೋರ್ಟ್ ನ್ಯಾಯಾಧೀಶರಾಗಿ ನೀಲಾ ಗೋಖಲೆ ಹೆಸರು ಶಿಫಾರಸು
ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪುರೋಹಿತ ಪರ ವಾದಿಸಿದ್ದ ನ್ಯಾಯವಾದಿ

ಹೊಸದಿಲ್ಲಿ,ಜ.11: ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಬಾಂಬೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನ್ಯಾಯವಾದಿ ನೀಲಾ ಕೇದಾರ ಗೋಖಲೆ(Neela Kedara Gokhale)ಯವರ ಹೆಸರನ್ನು ಮಂಗಳವಾರ ಶಿಫಾರಸು ಮಾಡಿದೆ.
ಗೋಖಲೆ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಲೆ.ಕ.ಪ್ರಸಾದ ಪುರೋಹಿತ ಪರ ವಕೀಲರಾಗಿದ್ದಾರೆ.
2008,ಸೆ.29ರಂದು ಉತ್ತರ ಮಹಾರಾಷ್ಟ್ರದ ಮಾಲೆಗಾಂವ್‌ನ ಮಸೀದಿಯೊಂದರ ಬಳಿ ನಿಲ್ಲಿಸಿದ್ದ ಬೈಕ್‌ಗೆ ಕಟ್ಟಲಾಗಿದ್ದ ಬಾಂಬ್ ಸ್ಫೋಟಿಸಿ ಆರು ಜನರು ಕೊಲ್ಲಲ್ಪಟ್ಟಿದ್ದರು ಮತ್ತು 100 ಜನರು ಗಾಯಗೊಂಡಿದ್ದರು. ಬಿಜೆಪಿಯ ಭೋಪಾಲ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರೂ ಪ್ರಕರಣದ ಆರೋಪಿಗಳಲ್ಲೊಬ್ಬರಾಗಿದ್ದಾರೆ.
ಜ.10ರಂದು ನಡೆದಿದ್ದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಕೊಲಿಜಿಯಂ ಸಭೆಯು ಗೋಖಲೆ ಸೇರಿದಂತೆ ಎಂಟು ಜನರ ಹೆಸರುಗಳನ್ನು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರಾಗಿ ಪದೋನ್ನತಿಗೆ ಶಿಫಾರಸು ಮಾಡಿದೆ.
ಅರಿಬಮ್ ಗುಣೇಶ್ವರ ಶರ್ಮಾ ಮತ್ತು ಗೊಲ್ಮೈ ಗೈಫುಲ್‌ಶಿಲು ಕಬುಯಿ ಅವರ ಹೆಸರುಗಳನ್ನು ಮಣಿಪುರ ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ,ಪಿ.ವೆಂಕಟ ಜ್ಯೋತಿರ್ಮಯಿ ಮತ್ತು ವಿ.ಗೋಪಾಲಕೃಷ್ಣ ರಾವ್ ಅವರ ಹೆಸರುಗಳನ್ನು ಆಂಧ್ರಪ್ರದೇಶ ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ,ಮೃದುಲಕುಮಾರ ಕಲಿಟಾ ಅವರ ಹೆಸರನ್ನು ಗೌಹಾಟಿ ಹಾಗೂ ರಾಮಚಂದ್ರ ದತ್ತಾತ್ರೇಯ ಹುದ್ದಾರ ಮತ್ತು ವೆಂಕಟೇಶ ನಾಯ್ಕಾ ಥವರ್ಯಾನಾಯ್ಕಾ ಅವರ ಹೆಸರುಗಳನ್ನು ಕರ್ನಾಟಕ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರನ್ನಾಗಿ ಕೊಲಿಜಿಯಂ ಶಿಫಾರಸು ಮಾಡಿದೆ.







