ಸ್ವರಕ್ಷಣೆಯೇ ಮಹಿಳೆಯರಿಗೆ ಭೂಷಣ: ವೆಲೆಟ್ ಫೆಮಿನಾ

ಉಡುಪಿ: ತಂತ್ರಜ್ಞಾನ ಬೆಳೆದಂತೆ ಮೋಸದ ಬಲೆಯಲ್ಲಿ ಬೀಳಿಸಲು ಪ್ರಯತ್ನಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಅವಿದ್ಯಾವಂತರಿಗಿಂತ ವಿದ್ಯಾವಂತರೆನಿಸಿಕೊಂಡವರೇ ಹೆಚ್ಚು ಹೆಚ್ಚು ಮೋಸದ ಬಲೆಗೆ ಬೀಳುತ್ತಿದ್ದಾರೆ. ಪ್ರಸಕ್ತ ಸನ್ನಿವೇಶದಲ್ಲಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ತಮ್ಮ ಬಗ್ಗೆ ಜಾಗರೂಕರಾಗಿರುವ ಅವಶ್ಯಕತೆ ಹೆಚ್ಚಾಗುತ್ತಿದೆ. ಈ ವೇಳೆ ಸ್ವರಕ್ಷಣೆ ಮತ್ತು ಜಾಗರೂಕತೆ ಎಲ್ಲಾ ಕಾಲಘಟ್ಟ ಮತ್ತು ಸನ್ನಿವೇಶಗಳಲ್ಲೂ ಮಹಿಳೆಯರಿಗೆ ಭೂಷಣ ಎಂದು ಉಡುಪಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ವೆಲೆಟಾ ಫೆಮಿನಾ ತಿಳಿಸಿದ್ದಾರೆ.
ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಇತ್ತೀಚೆಗೆ ನಡೆದ ಮಹಿಳಾ ಸುರಕ್ಷತಾ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಾಂತಿ ಪ್ರಭು ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಇರುವ ಸರಕಾರಿ ಸೌಲಭ್ಯ ಮತ್ತು ಯೋಜನೆಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.
ಆರ್‌ಡಿಎಸ್ ಸಂಸ್ಥೆ, ಶಾಲೆಯ ಗ್ರಾಹಕ ಕ್ಲಬ್ ಮತ್ತು ಎನ್ನೆಸ್ಸೆಸ್ ಘಟಕದ ಸಹಯೋಗದಲ್ಲಿ ಸಮುದಾಯ ಜಾಗೃತಿ, ಭಾಗವಹಿಸುವಿಕೆ, ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಚಟುವಟಿಕೆಗಳ ಅಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಮುದಾಯ ಅಭಿವೃದ್ಧಿ ಸಹಾಯಕರಾದ ಮಾಲತೇಶ್, ಎನ್ನೆಸ್ಸೆಸ್‌ನ ಮಂಜುಳಾ, ಗ್ರಾಹಕ ಕ್ಲಬ್‌ನ ಉಪಾಧ್ಯಕ್ಷೆ ಅನಘಾ ಹೊಳ್ಳ ಉಪಸ್ಥಿತರಿದ್ದರು.
ಶಿಕ್ಷಕ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಆರ್‌ಡಿಎಸ್ ಸಂಸ್ಥೆಯ ತಂಡ ಮುಖ್ಯಸ್ಥೆ ಜ್ಯೋತಿ ಸ್ವಾಗತಿಸಿ, ಮಹೇಶ್ ವಂದಿಸಿದರು.








