ಸಕಲೇಶಪುರ | ಗುಂಡೇಟಿನಿಂದ ವ್ಯಕ್ತಿ ಸಾವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಹಾಸನ : 11, ಜ: ಮೀನು ಹಿಡಿಯಲು ಹೋಗಿದ್ದ ವೇಳೆ ಓರ್ವ ಕೊಲೆಯಾಗಿ, ಇಬ್ಬರು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯ ತಂಬುಗೆರೆ ಗ್ರಾಮದ ವಾಸಿಗಳಾದ ನಾಗರಾಜು (60) ಮತ್ತು ಅನಿಲ್ (28) ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ ಎಂದು ತಿಳಿಸಿದರು.
ಸೋಮವಾರ ರಾತ್ರಿ ನಾಲ್ವರು ಸ್ನೇಹಿತರು ಜೊತೆಗೂಡಿ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ತಂಬಲಗೇರಿಯ ಹೇಮಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದರು. ಈ ವೇಳೆ ದುಷ್ಕರ್ಮಿಗಳು ಹಾರಿಸಿದ ಗುಂಡು ತಗುಲಿ ನವೀನ್ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂಬಂಧ ರಾಜಾಚಾರಿ ಅವರು ನೀಡಿದ ದೂರಿನ ಮೇರೆಗೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೈಯಕ್ತಿಕ ಧ್ವೇಷಕ್ಕಾಗಿ ಕೊಲೆ ಮಾಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಸಕಲೇಶಪುರ: ಮೀನು ಹಿಡಿಯಲು ಹೋದ ವ್ಯಕ್ತಿ ಅಪರಿಚಿತರ ಗುಂಡೇಟಿಗೆ ಬಲಿ, ಇನ್ನಿಬ್ಬರಿಗೆ ಗಾಯ







