ಸ್ವಾಮಿ ವಿವೇಕಾನಂದರು ಯುವಸಮುದಾಯದ ಶಕ್ತಿ: ನಳಿನ್ ಕುಮಾರ್

ಮುಡಿಪು: ಇಡೀ ಜಗತ್ತಿಗೆ ಭಾರತದ ಚಿಂತನೆ, ಆಧ್ಯಾತ್ಮದ ಬೆಳಕನ್ನು ತೋರಿಸುವ ಮುಖಾಂತರ ವಿವೇಕಾನಂದರು ನಮಗೆಲ್ಲರಿಗೂ ಪ್ರೇರಣೆಯಾಗಿದ್ದಾರೆ. ಇಡೀ ವಿಶ್ವವೇ ವಿವೇಕಾನಂದರ ಚಿಂತನೆಯತ್ತ ಸಾಗುತ್ತಿದೆ. ವಿವೇಕಾನಂದರು ಯುವಶಕ್ತಿಗೆ ಚೈತನ್ಯ ಹಾಗೂ ಪ್ರೇರಣೆಯಾಗಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಮುಡಿಪುವಿನ ನವೋದಯ ವಿದ್ಯಾಲಯದ ಆವರಣದಲ್ಲಿ ಬುಧವಾರ ಸ್ವಾಮಿ ವಿವೇಕಾನಂದ ಪ್ರತಿಮೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಅನೇಕ ಶತಮಾನಗಳ ಹಿಂದೆಯೇ ಭಾರತ ತಕ್ಷಶಿಲಾದಂತಹ ವಿಶ್ವವಿದ್ಯಾಲಯಗಳ ಮೂಲಕ ಜಗತ್ಪ್ರಸಿದ್ಧವಾಗಿತ್ತು. ಅದ್ದರಿಂದ ಭಾರತವು ಜ್ಞಾನಗಂಗೆಯಾಗಿದೆ. ನಮಗೆಲ್ಲರಿಗೂ ವಿವೇಕಾನಂದರೇ ಹೀರೋ ಆಗಬೇಕು. ಯಾಕೆಂದರೆ ಅವರು ಆಧ್ಯಾತ್ಮದೊಂದಿಗೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಪ್ರೇರಣೆಕೊಟ್ಟವರಾಗಿದ್ದಾರೆ ಎಂದರು.
ಮುಡಿಪುವಿನ ನವೋದಯ ವಿದ್ಯಾಲಯವು ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಪರಂಪರೆ ಒತ್ತುಕೊಡುತ್ತಿದ್ದು, ಇದೀಗ ವಿವೇಕಾನಂದರ ವಿಗ್ರಹ ಸ್ಥಾಪನೆಯ ಮೂಲಕ ವಿಧ್ಯಾರ್ಥಿಗಳಲ್ಲಿ ರಾಷ್ಟ್ರ ಪ್ರೇಮವನ್ಮು ಬೆಳೆಸಲು ಸ್ಪೂರ್ತಿ ನೀಡಿದೆ ಎಂದರು.
ಪೋಷಕ ಶಿಕ್ಷಕ ಸಮಿತಿಯ ಸದಸ್ಯರಾದ ಪ್ರೊ.ಜಗದೀಶ್ ಪ್ರಸಾದ್ ಅವರು ಮಾತನಾಡಿ, ವಿವೇಕಾನಂದರೂ ಯುವ ಸಮುದಾಯಕ್ಕೆ, ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರು ಸ್ಪೂರ್ತಿಯಾಗಿದ್ದಾರೆ. ಅವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳೋಣ ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಪಿ.ರಾಜೇಶ್, ಮೌಲ್ಯ ಆಧಾರಿತ ಶಿಕ್ಷಣಕ್ಕೆ ಸ್ವಾಮಿ ವಿವೇಕಾನಂದರು ಒತ್ತುಕೊಟ್ಟಿದ್ದಾರೆ. ವಿದ್ಯಾಲಯದಲ್ಲಿ ಅವರ ವಿಗ್ರಹ ನಿರ್ಮಾಣದಿಂದ ನವೋದಯ ಶಾಲೆಯ ವಿದ್ಯಾರ್ಥಿಗಳಿಗೆ ನವಚೈತನ್ಯ ಬಂದಂತಾಗಿದೆ. ಇಂದು ಪ್ರತಿಷ್ಟಿತ ಹುದ್ದೆಯಲ್ಲಿರುವ ಐಎಎಸ್ ಅಧಿಕಾರಿಗಳು, ವಿಜ್ಞಾನಿಗಳಲ್ಲಿ ಹೆಚ್ಚಿನವರು ನವೋದಯ ಶಾಲೆಯಲ್ಲೇ ಕಲಿತವರು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರಿಸ್ ನ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್, ಪೋಷಕ ಶಿಕ್ಷಕ ಸಮಿತಿಯ ಸದಸ್ಯೆ ಶೋಭಾ ಶೆಟ್ಟಿ, ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಗ್ರಹ ಶಿಲ್ಪಿಗಳಾದ ಕಿರಣ್ ಕುಮಾರ್, ಚಿತ್ರಕಲಾ ಶಿಕ್ಷಕರಾದ ಅರುಣ್ ಕುಮಾರ್, ವಿಗ್ರಹ ನಿರ್ಮಾಣಕ್ಕೆ ಸಹಕರಿಸಿದ ಜಯಂತಿ ಅವರನ್ನು ಗೌರವಿಸಲಾಯಿತು.
ಉಪಪ್ರಾಂಶುಪಾಲೆ ರೇಖಾ ಅಶೋಕ್ ಸ್ವಾಗತಿಸಿ, ಶಿಕ್ಷಕರಾದ ಅಶೋಕ್ ಕೆ ವಂದಿಸಿದರು. ಶಿಕ್ಷಕರಾದ ಎಂ.ಯೋಗೀಶ್ ಅವರು ಕಾರ್ಯಕ್ರಮ ನಿರೂಪಿಸಿದರು.