2ನೇ ಹಂತದಲ್ಲಿಯೂ ಉಳಿದ ಪೌರಕಾರ್ಮಿಕರ ಸೇವೆ ಖಾಯಂ: ಎಂ.ಶಿವಣ್ಣ ಕೋಟೆ
‘ಮ್ಯಾನ್ಯುಯಲ್ ಸ್ಕ್ಯಾವೆಂಜರ್: ಜಾಗೃತಿ ಕಾರ್ಯಾಗಾರ’

ಕಲಬುರಗಿ, ಜ.11: ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಶಿಫಾರಸ್ಸಿನಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೇಶದಲ್ಲಿಯೆ ಮಾದರಿಯಾಗಿ 11,133 ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸಿದ್ದು, ಉಳಿದ ಪೌರ ಕಾರ್ಮಿಕರಿಗೆ ಎರಡನೆ ಹಂತದಲ್ಲಿ ಖಾಯಂ ಭಾಗ್ಯ ಸಿಗಲಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಕೋಟೆ ಹೇಳಿದರು.
ಬುಧವಾರ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳಿಗೆ ಜಾಗೃತಿ, ನಿಗಮದ ಸೌಲಭ್ಯ ಕುರಿತು ಕಾರ್ಯಾಗಾರ ಹಾಗೂ ನಿಗಮದ ಸ್ವತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರ ಮತ್ತು ಸ್ವಚ್ಛತಾ ಕಾರ್ಮಿಕರ ಬಗ್ಗೆ ತುಂಬಾ ಕಾಳಜಿ ಹೊಂದಿರುವ ಸರಕಾರ ಇದಾಗಿದ್ದು, ಇತ್ತೀಚೆಗೆ ಬೆಳಗಾವಿಯಲ್ಲಿ ಪೌರ ಕಾರ್ಮಿಕರಿಗೆ ಖಾಯಂ ನೇಮಕಾತಿ ಆದೇಶ ನೀಡುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಇವರನ್ನು ‘ಪೌರ ನೌಕರರು’ ಎಂದು ಸಂಬೋಧಿಸಿ ಇತರೆ ಸರಕಾರಿ ನೌಕರರಂತೆ ಗೌರವ ನೀಡಿದರು ಎಂದು ಅವರು ತಿಳಿಸಿದರು.
2013ರಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜಿಂಗ್ ನಿಷೇಧ ಕಾಯ್ದೆ ಜಾರಿಗೆ ತಂದು ಮಾನವ ಮಲ-ಮೂತ್ರ ತಲೆ ಮೇಲೆ ಹೊರುವುದನ್ನು ಮತ್ತು ಪಿಟ್‍ನಲ್ಲಿ ಒಳಗಡೆ ಹೋಗಿ ಕೆಲಸ ಮಾಡುವುದನ್ನು ನಿಷೇಧಿಸಿದ್ದರು ಸಹ ಅಲ್ಲಲ್ಲಿ ಮಾನವ ಸಮಾಜ ತಲೆ ತಗ್ಗಿಸುವಂತಹ ಘಟನೆಗಳು ನಡೆಯುತ್ತಿರುವುದಕ್ಕೆ ಅವರು ಕಳವಳ ವ್ಯಕ್ತಪಡಿಸಿದರು.
ಇದು ನಿರ್ಮೂಲನೆಯಾಗಬೇಕು. ಪಿಟ್ ಒಳಗಡೆ ಹೋಗಿ ಕೆಲಸ ಮಾಡಿದ ಪರಿಣಾಮ ಇದೂವರೆಗೆ ರಾಜ್ಯದಲ್ಲಿ 90 ಜನ ಸಾವನ್ನಪ್ಪಿದ್ದಾರೆ. ಸಫಾಯಿ ಕರ್ಮಚಾರಿಗಳು ಬೇರೆ ವೃತ್ತಿಯಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಬೇಕು. ಇವರ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಪ್ರವೇಶ ಪರೀಕ್ಷೆ ಇಲ್ಲದೆ ಪ್ರವೇಶಾತಿ ನೀಡಲಾಗುತ್ತಿದ್ದು, ಮಕ್ಕಳನ್ನು ಇಲ್ಲಿಗೆ ಸೇರಿಸಿ ಉನ್ನತ ಶಿಕ್ಷಣ ಕೊಡಿಸಬೇಕು. ನಿಮ್ಮ ವೃತ್ತಿ ಮುಂದಿನ ಪೀಳಿಗೆಗೆ ಮುಂದುವರೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಶಿವಣ್ಣ ಕೋಟೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ವಹಿಸಿದ್ದರು. ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್, ವ್ಯವಸ್ಥಾಪಕ ನಿರ್ದೇಶಕ ಕೆ.ಬಿ.ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







