ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವು: 8 ಮಂದಿ ವಿರುದ್ಧ ಪ್ರಕರಣ ದಾಖಲು, ಮೂವರು ಅಧಿಕಾರಿಗಳ ಅಮಾನತು

ಬೆಂಗಳೂರು, ಜ.11: ಹೆಣ್ಣೂರಿನ ಎಚ್‍ಬಿಆರ್ ಲೇಔಟ್ ಬಳಿ ಮೆಟ್ರೋ ಪಿಲ್ಲರ್ ಚೌಕಟ್ಟು ಬಿದ್ದು ತಾಯಿ-ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ವಿರುದ್ದ ಗೋವಿಂದಪುರ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಸಮನ್ಸ್ ಕೊಟ್ಟು 8 ಮಂದಿಗೂ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ. ಮೃತ ತೇಜಸ್ವಿನಿ ಪತಿ ಲೋಹಿತ್ ಕೊಟ್ಟ ದೂರಿನ ಮೇಲೆ ಐವರ ಮೇಲೆ ಗೋವಿಂದಪುರ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಮೊದಲ ಆರೋಪಿ ನಾಗಾರ್ಜುನ ಕಸ್ಟ್ರಕ್ಷನ್ ಕಂಪೆನಿ(ಎನ್‍ಸಿಸಿ), ಎರಡನೆ ಆರೋಪಿ ಎನ್‍ಸಿಸಿ ಜೆಇ ಪ್ರಭಾಕರ್, ಎನ್‍ಸಿಸಿ ನಿರ್ದೇಶಕ ಚೈತನ್ಯ, ಎನ್ ಸಿಸಿಯ ಮಾಲತಿ, ವಿಕಾಸ್ ಸಿಂಗ್, ಲಕ್ಷ್ಮಿಪತಿ, ವೆಂಕಟೇಶ್ ಸಿಂಗ್, ಮಹೇಶ್ ಭಂಡಾರಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಅವರ ಜೊತೆ ಮೆಟ್ರೋ ಗುತ್ತಿಗೆದಾರರು, ಆರೋಪಿ ಸೈಟ್ ಇನ್‍ಚಾರ್ಜ್ ಅಧಿಕಾರಿ, ಬಿಎಂಆರ್‍ಸಿಎಲ್ ಅಧಿಕಾರಿಗಳು ಇತರರ ಮೇಲೆ ಐಪಿಸಿ ಸೆಕ್ಷನ್ 336, 337, 304ಎ, 427, 34 ಅಡಿಯಲ್ಲಿ ಕೇಸ್ ದಾಖಲಾಗಿದೆ. ಎಲ್ಲ ಆರೋಪಿಗಳಿಗೂ ನೋಟಿಸ್ ಕೊಟ್ಟು ವಿಚಾರಣೆ ನಡೆಸಲು ಸಿದ್ಧತೆ ನಡೆಸಲಾಗಿದೆ.
ಐಐಎಸ್‍ಸಿಗೆ ಮನವಿ: ಈ ನಡುವೆ ಪಿಲ್ಲರ್ 218ರಲ್ಲಿ ಸ್ಟೇಜಿಂಗ್ ಮತ್ತು ಗೈವೈರ್ ಬೆಂಬಲದೊಂದಿಗೆ ಪಿಲ್ಲರ್ ನಿರ್ಮಾಣ ಹಾಗೂ ಬಲವರ್ಧನೆ ಕಾರ್ಯ ನಡೆಯುತ್ತಿತ್ತು. ಆದರೆ, 18 ಮೀಟರ್ ಎತ್ತರದ ಪಿಲ್ಲರ್‍ನ ಗೈವೈರ್‍ಗಳ ಪೈಕಿ ಒಂದು ತಂತಿ ಸಡಿಲಗೊಂಡು ತುಂಡಾಗಿದೆ.
ಇದರಿಂದಾಗಿ ಪಿಲ್ಲರ್ ಕೆ.ಆರ್.ಪುರಂ ಹೆಬ್ಬಾಳ ಮುಖ್ಯರಸ್ತೆಗೆ ಅಡ್ಡವಾಗಿ ಬಿದ್ದಿದ್ದು, ಸಾವುನೋವು ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ)ಗೆ ಮನವಿ ಮಾಡಲಾಗುವುದು. ಆಂತರಿಕ ತಾಂತ್ರಿಕ ತಂಡವೂ ಈ ಬಗ್ಗೆ ತನಿಖೆ ನಡೆಸಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‍ಸಿಎಲ್) ತಿಳಿಸಿದೆ.
ಮೂವರು ಅಧಿಕಾರಿಗಳ ಅಮಾನತು: ಅಂಜುಂ ಪರ್ವೇಝ್
ಮೆಟ್ರೋ ಪಿಲ್ಲರ್ ಚೌಕಟ್ಟು ಕುಸಿದು ತಾಯಿ ಮಗು ಮೃತಪಟ್ಟ ಪ್ರಕರಣದ ಸಂಬಂಧ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ ಎಂದು ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಹೇಳಿದ್ದಾರೆ. ಡೆಪ್ಯೂಟಿ ಚೀಫ್ ಇಂಜಿನಿಯರ್, ಎಕ್ಸಿಕ್ಯೂಟಿವ್ ಇಂಜಿನಿಯರ್, ಸೆಕ್ಷನ್ ಸೂಪರ್ ವೈಸರ್ ಅವರುಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.







