ಅಫ್ಘಾನ್ ಸಚಿವಾಲಯದ ಬಳಿ ಆತ್ಮಾಹುತಿ ಬಾಂಬ್ ದಾಳಿ: ಕನಿಷ್ಟ 5ಮಂದಿ ಮೃತ್ಯು; ಹಲವರಿಗೆ ಗಾಯ

ಕಾಬೂಲ್, ಜ.11: ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯದ ಬಳಿ ಆತ್ಮಾಹುತಿ ಬಾಂಬರ್ ಒಬ್ಬ ತನ್ನನ್ನು ಸ್ಫೋಟಿಸಿಕೊಂಡಿದ್ದು ಈ ಸ್ಫೋಟದಲ್ಲಿ ಕನಿಷ್ಟ 5 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ವಿದೇಶಾಂಗ ಸಚಿವಾಲಯಕ್ಕೆ ಚೀನಾದ ನಿಯೋಗ ಬುಧವಾರ ಭೇಟಿ ನೀಡುವ ಕಾರ್ಯಕ್ರಮವಿತ್ತು. ನಿಯೋಗದ ಭೇಟಿಗೆ ಸ್ವಲ್ಪ ಮೊದಲು ಬಾಂಬ್ ದಾಳಿ ನಡೆದಿದೆ. ವಿದೇಶಾಂಗ ಸಚಿವಾಲಯದ ಪಕ್ಕದಲ್ಲಿರುವ ಮಾಹಿತಿ ಇಲಾಖೆಯಲ್ಲಿ ಎಎಫ್ಪಿ ಸುದ್ಧಿಸಂಸ್ಥೆ ಸಚಿವರೊಂದಿಗೆ ಸಂದರ್ಶನ ನಡೆಸುತ್ತಿದ್ದ ಸಂದರ್ಭದಲ್ಲಿ ಬಾಂಬ್ ಸ್ಫೋಟಿಸಿದೆ.
ಬೆನ್ನಿನ ಮೇಲೆ ಬ್ಯಾಗ್ ಮತ್ತು ಹೆಗಲಲ್ಲಿ ರೈಫಲ್ ನೇತುಹಾಕಿಕೊಂಡಿದ್ದ ವ್ಯಕ್ತಿಯೊಬ್ಬ ಹಠಾತ್ತನೆ ವಿದೇಶಾಂಗ ಇಲಾಖೆಯ ಕಚೇರಿಯ ಬಳಿ ಬಂದು ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ. ಬಾಂಬ್ ಸ್ಫೋಟದಲ್ಲಿ ಹಲವು ಸಾವು-ನೋವು ಸಂಭವಿಸಿರುವುದನ್ನು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಝದ್ರಾನ್ ದೃಢಪಡಿಸಿದ್ದಾರೆ.
ಸ್ಫೋಟದ ಸ್ಥಳದಲ್ಲಿ ಹಲವರು ಗಾಯಗೊಂಡು ಒದ್ದಾಡುತ್ತಿರುವ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮ ಪ್ರಸಾರ ಮಾಡಿದೆ. ವಿದೇಶಾಂಗ ಇಲಾಖೆಗೆ ಚೀನಾದ ನಿಯೋಗ ಭೇಟಿ ನೀಡುವ ಕಾರ್ಯಕ್ರಮವಿತ್ತು. ಸ್ಫೋಟದ ಸಂದರ್ಭ ಸಚಿವಾಲಯದಲ್ಲಿ ಚೀನಾ ನಿಯೋಗದವರು ಇದ್ದರೇ ಎಂಬ ಬಗ್ಗೆ ನಮಗೆ ಮಾಹಿತಿಯಿಲ್ಲ ಎಂದು ಮಾಹಿತಿ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ಸಚಿವ ಮುಹಾಜೆರ್ ಫರಾಹಿ ಹೇಳಿದ್ದಾರೆ