ಉಕ್ರೇನ್ ನಲ್ಲಿ ಸ್ವಾಧೀನ ಪಡಿಸಿಕೊಂಡ ಪ್ರದೇಶದಲ್ಲಿ ಪರಿಸ್ಥಿತಿ ಕಠಿಣವಿದೆ: ಪುಟಿನ್

ಮಾಸ್ಕೋ, ಜ.11: ಉಕ್ರೇನ್ನಿಂದ ರಶ್ಯ ಸ್ವಾಧೀನಪಡಿಸಿಕೊಂಡಿರುವ ಪ್ರದೇಶದಲ್ಲಿ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುಧವಾರ ಹೇಳಿದ್ದಾರೆ.
ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಸೆಪ್ಟಂಬರ್ನಲ್ಲಿ ಸ್ವಾಧೀನಕ್ಕೆ ಪಡೆದಿರುವ ಪ್ರದೇಶದಲ್ಲಿನ ಜನಜೀವನ ಸುಧಾರಿಸಲು ಅಗತ್ಯವಿರುವ ಸಂಪನ್ಮೂಲ ರಶ್ಯದ ಬಳಿಯಿದೆ ಎಂದರು.
ಈ ಮಧ್ಯೆ, ರಶ್ಯದ ಪರ ಹೋರಾಟ ನಡೆಸುತ್ತಿರುವ ಬಾಡಿಗೆ ಸಿಪಾಯಿಗಳ ತುಕಡಿ ‘ವಾಗ್ನರ್’ನ ಮುಖ್ಯಸ್ಥ ಯೆವ್ಜಿನಿ ಪ್ರಿಗೊಝಿನ್, ತಮ್ಮ ಪಡೆಯು ಉಕ್ರೇನ್ನ ಸೊಲೆದಾರ್ ನಗರವನ್ನು ವಶಕ್ಕೆ ಪಡೆದಿದೆ ಎಂದು ಬುಧವಾರ ಘೋಷಿಸಿದ್ದಾರೆ. ಈ ವಾರ ನಡೆದ ತೀವ್ರ ಸಂಘರ್ಷದ ಬಳಿಕ ಸೊಲೆದಾರ್ ನಗರ ನಮ್ಮ ನಿಯಂತ್ರಣಕ್ಕೆ ಬಂದಿದೆ. ನಗರದ ಹೊರವಲಯದಲ್ಲಿ ಅಲ್ಲಲ್ಲಿ ಸಣ್ಣ ಪುಟ್ಟ ಘರ್ಷಣೆ ಮುಂದುವರಿದಿದೆ ಎಂದವರು ಹೇಳಿದ್ದಾರೆ. ಸೊಲೆದಾರ್ ನಗರ ನಮ್ಮ ವಶಕ್ಕೆ ಬಂದಿದೆ ಎಂದು ರಶ್ಯದ ಸರಕಾರಿ ಸ್ವಾಮ್ಯದ ರಿಯಾ ನೊವೊಸ್ತಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಆದರೆ ಈ ಹೇಳಿಕೆಯನ್ನು ಉಕ್ರೇನ್ ಸೇನೆ ನಿರಾಕರಿಸಿದೆ. ವೈರಿ ಪಡೆ ಸೊಲೆದಾರ್ ನಗರದತ್ತ ಮುನ್ನುಗ್ಗುವ ಪ್ರಯತ್ನವನ್ನು ನಮ್ಮ ಸೇನೆ ವಿಫಲಗೊಳಿಸಿದೆ. ನಗರದ ಸುತ್ತಮುತ್ತ ಭೀಕರ ಸಂಘರ್ಷ ನಡೆಯುತ್ತಿದೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.