ಸ್ವಾಮಿ ವಿವೇಕಾನಂದರ ಬದುಕಿನ ಸುತ್ತ...
ಇಂದು ಸ್ವಾಮಿ ವಿವೇಕಾನಂದರ ಜನ್ಮದಿನ

ಇಂದು ಸ್ವಾಮಿ ವಿವೇಕಾನಂದರ ಜನ್ಮದಿನ
- ಸ್ವಾಮಿ ವಿವೇಕಾನಂದರು ತಮ್ಮ ವಾಗ್ಮಿ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ, ವಿಶೇಷವಾಗಿ ಅವರು ಚಿಕಾಗೋದಲ್ಲಿ ಮಾಡಿದ ಇಂಗ್ಲಿಷ್ ಭಾಷಣ ಇಂದಿಗೂ ಪ್ರಸಿದ್ಧ. ಆದರೆ ಓದಿನಲ್ಲಿ ಅವರು ಜಾಣರಾಗಿರಲಿಲ್ಲ. ಬಿಎಯಲ್ಲಿ, ಇಂಗ್ಲಿಷ್‌ನಲ್ಲಿ ಅವರು ಗಳಿಸಿದ್ದು ಕೇವಲ ಶೇ. 50ರಷ್ಟು ಅಂಕ.
- ಅವರ ತಂದೆಯ ಮರಣದ ನಂತರ, ಅವರ ಕುಟುಂಬವು ಅತ್ಯಂತ ಬಡತನದಲ್ಲಿತ್ತು. ಮನೆಯಲ್ಲಿ ಉಳಿದವರಿಗೆ ಸರಿಯಾಗಿ ಊಟ ಸಿಗಲಿ ಎಂದು ಎಲ್ಲೋ ಊಟಕ್ಕೆ ಕರೆದಿದ್ದಾರೆ ಎಂದು ಹಲವು ಬಾರಿ ಸ್ವಾಮೀಜಿ ಮನೆಯಲ್ಲಿ ಸುಳ್ಳು ಹೇಳುತ್ತಿದ್ದರು.
- ಬಿಎ ಮಾಡಿದರೂ ಉದ್ಯೋಗವಿಲ್ಲದ ಕಾರಣ ಅವರು ದೇವರ ಮೇಲಿನ ನಂಬಿಕೆಯನ್ನೇ ಕಳೆದು ಕೊಂಡಿದ್ದರು.
- ವಿವೇಕಾನಂದರ ಚಿಕ್ಕಪ್ಪ ಜಿ. ತಾರಕನಾಥ್ ಮರಣದ ನಂತರ, ಅವರ ಚಿಕ್ಕಮ್ಮ ವಿವೇಕಾನಂದರ ಕುಟುಂಬವನ್ನು ಅವರ ಪೂರ್ವಜರ ಮನೆಯಿಂದ ಹೊರಹಾಕಿದರು ಮತ್ತು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು.
- ವಿವೇಕಾನಂದರ ಸಹೋದರಿ ಜೋಗೇಂದ್ರಬಾಲಾ ಆತ್ಮಹತ್ಯೆಗೆ ಶರಣಾಗಿದ್ದರು.
- ಖೇತ್ರಿಯ ಮಹಾರಾಜ್ ಅಜಿತ್ ಸಿಂಗ್ ಅವರು ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಸ್ವಾಮೀಜಿಯ ತಾಯಿಗೆ ನಿರಂತರವಾಗಿ 100 ರೂಪಾಯಿಗಳನ್ನು ರಹಸ್ಯವಾಗಿ ಕಳುಹಿಸುತ್ತಿದ್ದರು.
- ಸನ್ಯಾಸಿಯಾದಾಗ, ಅವರ ಹೆಸರು ಸ್ವಾಮಿ ವಿವಿದಿಶಾನಂದ ಎಂದಾಯಿತು, ಆದರೆ ಚಿಕಾಗೋಗೆ ತೆರಳುವ ಮೊದಲು, ಅವರು ತಮ್ಮ ಹೆಸರನ್ನು ವಿವೇಕಾನಂದ ಎಂದು ಬದಲಾಯಿಸಿಕೊಂಡರು.
- ಸ್ವಾಮಿ ವಿವೇಕಾನಂದರು ಚಹಾವನ್ನು ತುಂಬ ಇಷ್ಟಪಡುತ್ತಿದ್ದರು, ಆಗಿನ ನಂಬಿಕೆಗಳಿಗೆ ವಿರುದ್ಧವಾಗಿ, ಅವರು ತಮ್ಮ ಮಠದಲ್ಲಿ ಚಹಾವನ್ನು ಕುಡಿಯಲು ಅನುಮತಿ ಕೊಟ್ಟಿದ್ದರು. ಒಮ್ಮೆ ಅವರು ಬಾಲಗಂಗಾಧರ ತಿಲಕರೂ ಸೇರಿದಂತೆ ಎಲ್ಲರಿಗೂ ಮುಘಲಾಯಿ ಚಹಾ ಮಾಡಿಕೊಟ್ಟಿದ್ದರು. ಅವರಿಗೆ ಖಿಚಡಿಯೆಂದರೂ ಅಷ್ಟೇ ಇಷ್ಟವಿತ್ತು. ಬಂಗಾಲಿಯಾಗಿ ಅವರು ಆಹಾರ ಪ್ರಿಯರಾಗಿದ್ದರು.
- ಭಾರತದ ವೇದಾಂತವು ಅಮೆರಿಕ ಮತ್ತು ಯುರೋಪಿನ ಪ್ರತಿಯೊಂದು ದೇಶವನ್ನು ತಲುಪಿದ್ದು ಸ್ವಾಮಿ ವಿವೇಕಾನಂದರಿಂದ. ಅವರು ರಾಮಕೃಷ್ಣ ಮಿಷನ್ ಸ್ಥಾಪಿಸಿದರು ಮತ್ತು ಇನ್ನೂ ತಮ್ಮ ಕೆಲಸವನ್ನು ಮಾಡಿದರು. ಸ್ವಾಮಿ ರಾಮಕೃಷ್ಣ ಪರಮಹಂಸರ ಪ್ರತಿಭಾವಂತ ಶಿಷ್ಯರಾಗಿದ್ದರು.
- ರಾಮಕೃಷ್ಣರು 16 ಆಗಸ್ಟ್ 1886ರಂದು ನಿಧನರಾದರು. ಅವರು ವಿವೇಕಾನಂದರಿಗೆ ದೇವರನ್ನು ಪೂಜಿಸುವುದಕ್ಕಿಂತ ಮನುಷ್ಯರ ಸೇವೆ ಮಾಡುವುದು ದೊಡ್ಡದು ಎಂಬುದನ್ನು ಕಲಿಸಿದ್ದರು.
- ಜುಲೈ 1893ರಲ್ಲಿ ವಿವೇಕಾನಂದರು ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಚಿಕಾಗೋಗೆ ಹೋದರು. ಕಾರಣಾಂತರಗಳಿಂದ ಅವರಿಗೆ ಮೊದಲು ಮಾತನಾಡುವ ಅವಕಾಶ ಸಿಗಲಿಲ್ಲ. ಆದರೆ ನಂತರ, ಪ್ರೊಫೆಸರ್ ಜಾನ್ ಹೆನ್ರಿ ಅವರ ಸಹಾಯದಿಂದ ಅವರಿಗೆ ಮಾತನಾಡಲು ಅವಕಾಶ ಸಿಕ್ಕಿತು.
- 1893ರ ಸೆಪ್ಟಂಬರ್ 11ರಂದು ವಿಶ್ವ ಧರ್ಮ ಸಮ್ಮೇಳನದಲ್ಲಿ ಅವರು ಹಿಂದುತ್ವದ ಬಗ್ಗೆ ತಮ್ಮ ಮೊದಲ ಭಾಷಣ ಮಾಡಿದರು. ಅವರು ತಮ್ಮ ಭಾಷಣವನ್ನು ‘‘ಸಿಸ್ಟರ್ ಆ್ಯಂಡ್ ಬ್ರದರ್ಸ್ ಆಫ್ ಅಮೆರಿಕ’’ ಎಂದು ಪ್ರಾರಂಭಿಸಿದರು. ಇದನ್ನು ಕೇಳಿ ಅಲ್ಲಿದ್ದ ಜನರೆಲ್ಲ ಎದ್ದುನಿಂತು ಕರತಾಡನ ಮಾಡಿದರು. ಆ ವೇಳೆ ಸುಮಾರು 7 ಸಾವಿರ ಜನರು ಅಲ್ಲಿದ್ದರು.
- ಚಿಕಾಗೋ ಭಾಷಣದ ನಂತರ, ಅವರು ಪ್ರಪಂಚದಾದ್ಯಂತ ಹಲವಾರು ಭಾಷಣಗಳನ್ನು ನೀಡಿದರು ಮತ್ತು ಬಹಳಷ್ಟು ಜನರನ್ನು ಭೇಟಿಯಾದರು. ಭಗಿನಿ ನಿವೇದಿತಾ, ಮ್ಯಾಕ್ಸ್ ಮುಲ್ಲರ್, ಪಾಲ್ ಡ್ಯೂಸೆನ್ ಮೊದಲಾದವರು ಆ ಸಾಲಿನಲ್ಲಿದ್ದಾರೆ.
- ಅವರು 1897ರಲ್ಲಿ ಭಾರತಕ್ಕೆ ಮರಳಿದರು. ಭಾರತದಲ್ಲಿಯೂ ಅನೇಕ ಭಾಷಣಗಳನ್ನು ಮಾಡಿದರು. ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ಉಪನ್ಯಾಸ ನೀಡಿದರು. ಅವರ ಭಾಷಣಗಳು ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್ ಅವರಂತಹ ನಾಯಕರ ಮೇಲೆ ಹೆಚ್ಚಿನ ಪ್ರಭಾವ ಬೀರಿದವು.
- 1899ರಲ್ಲಿ, ಅವರು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ನ್ಯೂಯಾರ್ಕ್‌ನಲ್ಲಿ ವೇದಾಂತ ಸೊಸೈಟಿಯನ್ನು ಮತ್ತು ಕ್ಯಾಲಿಫೋರ್ನಿಯಾದಲ್ಲಿ ಶಾಂತಿ ಆಶ್ರಮವನ್ನು ಸ್ಥಾಪಿಸಿದರು.
- ಅವರ ಅನೇಕ ಪುಸ್ತಕಗಳಲ್ಲಿ ಕರ್ಮ ಯೋಗ (1896), ರಾಜ ಯೋಗ (1896), ವೇದಾಂತ ಶಾಸ್ತ್ರ (1896), ಕೊಲಂಬೊದಿಂದ ಅಲ್ಮೋರವರೆಗಿನ ಭಾಷಣಗಳು (1897), ಭಕ್ತಿ ಯೋಗ ಮೊದಲಾದವು ಪ್ರಮುಖವಾದವುಗಳು.
- ಕಷ್ಟದಲ್ಲಿರುವವರ ಸೇವೆಯಲ್ಲಿ ಎಷ್ಟು ಮಗ್ನರಾಗಿದ್ದರು ಎಂದರೆ ಅವರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲೇ ಇಲ್ಲ. ಅವರ 39 ವರ್ಷಗಳ ಅಲ್ಪಾವಧಿಯಲ್ಲಿ, ಮಧುಮೇಹ, ಅಸ್ತಮಾ, ಯಕೃತ್ತು ಮತ್ತು ಮೂತ್ರಪಿಂಡದ ಕಾಯಿಲೆಗಳು ಮತ್ತು ಇತರ ಅನೇಕ ಕಾಯಿಲೆಗಳೂ ಸೇರಿದಂತೆ ಸುಮಾರು 31 ಕಾಯಿಲೆಗಳಿಂದ ಅವರು ಬಳಲುವಂತಾಗಿತ್ತು.
- ಸ್ವಾಮಿ ವಿವೇಕಾನಂದರು 4 ಜುಲೈ 1902ರಂದು ತಮ್ಮ ಬೇಲೂರು ಮಠದಲ್ಲಿ ನಿಧನರಾದರು. ಅವರ ಜನ್ಮದಿನವನ್ನು ಭಾರತದಲ್ಲಿ ರಾಷ್ಟ್ರೀಯ ಯುವ ದಿನ ಎಂದು ಆಚರಿಸಲಾಗುತ್ತದೆ.
Next Story





