ಸಚಿನ್ ತೆಂಡುಲ್ಕರ್-ವಿರಾಟ್ ಕೊಹ್ಲಿ ಪೈಕಿ ಯಾರು ಶ್ರೇಷ್ಠರು ಎಂಬ ಪ್ರಶ್ನೆಗೆ ಸೌರವ್ ಗಂಗುಲಿ ಉತ್ತರಿಸಿದ್ದು ಹೀಗೆ…
ಕೋಲ್ಕತಾ: ಶ್ರೀಲಂಕಾ ವಿರುದ್ಧ ಮಂಗಳವಾರ ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 45ನೇ ಏಕದಿನ ಶತಕ ಸಿಡಿಸಿದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭಾರೀ ಚರ್ಚೆಗೆ ಗ್ರಾಸರಾಗಿದ್ದಾರೆ. 34ರ ಹರೆಯದ ಬ್ಯಾಟರ್ 87 ಎಸೆತಗಳಲ್ಲಿ 113 ರನ್ ಗಳಿಸಿದ್ದರಿಂದ ಟೀಮ್ ಇಂಡಿಯಾ ಪ್ರವಾಸಿ ತಂಡದ ವಿರುದ್ಧ 67 ರನ್‌ಗಳ ಗೆಲುವು ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 113 ರನ್ ಗಳಿಸಿದ ವಿರಾಟ್ ಏಕದಿನ ಕ್ರಿಕೆಟ್ ನಲ್ಲಿ ತವರಿನಲ್ಲಿ ಅತ್ಯಂತ ಹೆಚ್ಚು ಶತಕ ಗಳಿಸಿದ ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು(20) ಸರಿಗಟ್ಟಿದರು. ತೆಂಡುಲ್ಕರ್ ಏಕದಿನ ಮಾದರಿ ಕ್ರಿಕೆಟ್ ನಲ್ಲಿ ಗಳಿಸಿರುವ ಅತಿ ಹೆಚ್ಚು ಶತಕಗಳ(49) ದಾಖಲೆಯನ್ನು ಸರಿಗಟ್ಟಲು ಕೊಹ್ಲಿಗೆ ಇನ್ನು ಕೇವಲ ನಾಲ್ಕು ಶತಕಗಳ ಅಗತ್ಯವಿದೆ.
ಸಚಿನ್ ಹಾಗೂ ಕೊಹ್ಲಿ ನಡುವೆ ಶ್ರೇಷ್ಠ ಆಟಗಾರ ಯಾರು ಎಂದು ಪಿಟಿಐ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗುಲಿ, "ಇದು ಉತ್ತರಿಸಲು ಕಷ್ಟಕರವಾದ ಪ್ರಶ್ನೆಯಾಗಿದೆ. ಕೊಹ್ಲಿ ಅದ್ಭುತ ಆಟಗಾರ. ಅವರು ಗುವಾಹಟಿಯಲ್ಲಿ ಗಳಿಸಿರುವಂತಹ ಅನೇಕ ಇನಿಂಗ್ಸ್‌ಗಳನ್ನು ಆಡಿದ್ದಾರೆ, 45 ಶತಕಗಳನ್ನು ಏಕಾಏಕಿ ಗಳಿಸಿರುವುದಲ್ಲ. ಅವರು ವಿಶೇಷ ಪ್ರತಿಭೆ. ಅವರು ರನ್ ಗಳಿಸದ ಸಮಯವೂ ಇದ್ದವು. ಆದರೆ ಅವರು ವಿಶೇಷ ಆಟಗಾರರಾಗಿದ್ದಾರೆ’’ ಎಂದರು.
ಮಂಗಳವಾರ ಕೊಹ್ಲಿ ತಮ್ಮ 45ನೇ ಏಕದಿನ ಶತಕ ಹಾಗೂ ಒಟ್ಟಾರೆ ಅಂತರ್ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 73ನೇ ಶತಕ ಸಿಡಿಸಿದ್ದಾರೆ.